ಮಡಿಕೇರಿ, ಫೆ. ೧೩: ಕರ್ನಾಟಕ ರಾಜ್ಯ ಮೊಗೇರ ಸಂಘದ ಸುವರ್ಣ ಸಂಭ್ರಮ ಅಂಗವಾಗಿ ತಾ. ೨೮ ಹಾಗೂ ಮಾ. ೧ ರಂದು ಸುಳ್ಯದ ಕೊಡಿಯಾಲ್‌ಬೈಲ್‌ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ಮೊಗೇರ ದುಡಿ ಆಯನ (ದುಡಿ ಜಾತ್ರೆ) ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧೆಡೆ ನೆಲೆಸಿರುವ ಸುಮಾರು ೫ ಸಾವಿರ ಮೊಗೇರ ಸಮುದಾಯದವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ರಾಜ್ಯಾಧ್ಯಕ್ಷ ನಂದರಾಜು ಸಂಕೇಶ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೭೪ರಲ್ಲಿ ಆರಂಭಗೊAಡ ಸಂಘವು ಯಶಸ್ವಿಯಾಗಿ ೫೦ ವರ್ಷಗಳನ್ನು ಪೂರೈಸಿದೆ. ಸಮುದಾಯಕ್ಕೆ ಅಗತ್ಯ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಅದನ್ನು ಅನುಷ್ಠಾನ ಮಾಡಲು ಸಂಘ ಶ್ರಮಿಸುತ್ತ ಬಂದಿದೆ. ಇದರ ಫಲವಾಗಿ ಮೊಗೇರ ಸಮುದಾಯಕ್ಕೆ ಶೇ ೬ ಒಳಮೀಸಲಾತಿಯೂ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ. ಸಮುದಾಯದ ಆಚಾರ-ವಿಚಾರ, ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಕೆಲಸವನ್ನೂ ಮಾಡಲಾಗುತ್ತಿದೆ. ಮೊಗೇರ ಮೂಲ ಸಮುದಾಯವಾಗಿದ್ದು, ಹೆಚ್ಚಿನ ದೈವಸ್ಥಾನಗಳನ್ನು ಹೊಂದಿದೆ. ಮೊದಲು ಮೊಗೇರ ಹೆಸರಿನಲ್ಲಿ ನಕಲಿ ಜಾತಿ ದೃಢೀಕರಣ ಪಡೆದುಕೊಂಡು ಅನ್ಯರು ಸರಕಾರದ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಇದನ್ನು ಸರಕಾರದ ಗಮನ ಸೆಳೆದು ಬಗೆಹರಿಸಲಾಗಿದೆ ಎಂದ ಅವರು, ಸಮುದಾಯದ ಬಲ ಪ್ರದರ್ಶನ ಹಾಗೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರಕಾರದ ಮುಂದಿಡಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ೨ ಸಾವಿರ, ೨ನೇ ದಿನ ೫ ಸಾವಿರದಷ್ಟು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ದುಡಿ ಆಯನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕರುಣಾಕರ್ ಪಲ್ಲತಡ್ಕ ಮಾತನಾಡಿ, ಕಾರ್ಯಕ್ರಮದಲ್ಲಿ ಮೊಗೇರ ಸಂಸ್ಕೃತಿಯ ಅನಾವರಣದೊಂದಿಗೆ ಜನಾಂಗಕ್ಕೆ ಸರಕಾರದ ಯೋಜನೆಗಳ ಉಪಯುಕ್ತ ಮಾಹಿತಿಗಳನ್ನು ಒದಗಿಸಲಾಗುವುದು. ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.

ತಾ. ೨೮ ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮಾ. ೧ ರಂದು ಸುಳ್ಯದ ಜ್ಯೋತಿ ವೃತ್ತದಿಂದ ಚನ್ನಕೇಶವ ದೇವಸ್ಥಾನ ತನಕ ಆಕರ್ಷಕ ಮೆರವಣಿಗೆ ನಡೆಯಲಿದೆ. ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯ ಉಪಾಧ್ಯಕ್ಷ ಪಿ.ಕೆ. ಚಂದ್ರು ಮಾತನಾಡಿ, ಕೊಡಗು ಸೇರಿದಂತೆ ವಿವಿಧೆಡೆ ಜಾತಿ ದೃಢೀಕರಣ ಪತ್ರ ಪಡೆಯಲು ಮೊಗೇರ ಸಮುದಾಯದವರು ಪರದಾಡುವ ಸ್ಥಿತಿ ಸೃಷ್ಟಿಯಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಗೌರವಾಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಸಮುದಾಯವನ್ನು ಸಂಘಟಿತಗೊಳಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದ್ದು, ಪ್ರತಿಯೊಬ್ಬರು ಭಾಗವಹಿಸಬೇಕು. ವಿಭಿನ್ನ ಸಂಸ್ಕೃತಿ, ಸಂಪ್ರದಾಯ ಹೊಂದಿರುವ ಮೊಗೇರ ಸಮುದಾಯದ ಹಿತಾಸಕ್ತಿ ಕಾಪಾಡಲು ನಾವೆಲ್ಲ ಒಂದಾಗಬೇಕು ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ. ಜನಾರ್ಧನ್, ಸ್ವಾಗತ ಸಮಿತಿ ಸಂಚಾಲಕ ಅಚ್ಯುತ ಮಲ್ಕಾಜೆ ಹಾಜರಿದ್ದರು.