ಸೋಮವಾರಪೇಟೆ, ಫೆ. ೧೩: ಕಾಫಿ ಹಣ್ಣಿನ ಹೊಸ ಬಳಕೆಗಾಗಿ ಸೋಮವಾರಪೇಟೆ ಯುವ ಉದ್ಯಮಿ ಯದುಕುಲ ಚೆಂಗಪ್ಪ ಅವರು ರಾಜ್ಯ ಸರ್ಕಾರದ ಎಲೆವೇಟೆ ೨೦೨೫ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಾಫಿ ಹಣ್ಣನ್ನು (ಕ್ಯಾಸ್ಕರಾ/ಕಾಫಿ ಹಸ್ಕ್) ನವೀನವಾಗಿ ಉಪಯೋಗಿಸಿ ಹೊಸ ರೀತಿಯ ಪಾನೀಯವನ್ನು ತಯಾರಿಸಿದಕ್ಕಾಗಿ, ಯದುಕುಲ ಚೆಂಗಪ್ಪ ಅವರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಎಲೆವೇಟೆ ೨೦೨೫ ಕಾರ್ಯಕ್ರಮದಲ್ಲಿ ಪ್ರಶಸ್ತಿ ದೊರೆತಿದೆ. ಸಾಮಾನ್ಯವಾಗಿ ಕಾಫಿ ಬೀಜ ಬೇರ್ಪಡಿಸಿದ ನಂತರ ಬಳಕೆಯಾಗದೇ ಉಳಿಯುವ ಕಾಫಿ ಹಣ್ಣನ್ನು ಒಣಗಿಸಿ, ಅದರಿಂದ ತಾಜಾ ಹಾಗೂ ಹಗುರವಾದ ರುಚಿಯ ರೆಡಿ-ಟು-ಡ್ರಿಂಕ್ ಸ್ಪಾರ್ಕ್ಲಿಂಗ್ ಪಾನೀಯವನ್ನು ತಯಾರಿಸುವ ಹೊಸ ಪ್ರಯತ್ನವನ್ನು ಯದುಕುಲ ಚೆಂಗಪ್ಪ ಅವರು ಮಾಡಿದ್ದಾರೆ.

ಈ ರೀತಿಯ ಉತ್ಪನ್ನವನ್ನು ಭಾರತದಲ್ಲಿ ಮೊದಲ ಬಾರಿಗೆ ರೂಪಿಸುವ ಪ್ರಯತ್ನಗಳಲ್ಲೊಂದು ಎಂಬುದು ಗಮನಾರ್ಹ. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಸುಲಭವಾಗಿ ದೊರೆಯುವ ಕಾಫಿ ಹಣ್ಣಿಗೆ ಹೊಸ ಮೌಲ್ಯ ನೀಡುವ ಮೂಲಕ ತಾಜಾತನ, ಹಗುರವಾದ ರುಚಿ ಮತ್ತು ವಿಭಿನ್ನ ಅನುಭವಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಯದುಕುಲ ಅವರು ಸೋಮವಾರಪೇಟೆಯ ತಲ್ತಾರೆಶೆಟ್ಟಳ್ಳಿ ಗ್ರಾಮದ ಬಗ್ಗನ ಮನೆ ಚೆಂಗಪ್ಪ ಮತ್ತು ರಾಣಿ ಚೆಂಗಪ್ಪ ಅವರ ಪುತ್ರ.