ಮಡಿಕೇರಿ, ಫೆ. ೧೨: ಸರ್ಫೇಸಿ ಕಾಯಿದೆಯಡಿ ಕಾಫಿ ತೋಟಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬೆಳೆಗಾರರು ಇದೀಗ ಕೊಂಚ ನಿರಾಳರಾಗಿದ್ದಾರೆ. ಆನ್‌ಲೈನ್ ಹರಾಜು ಸ್ಥಗಿತಗೊಳಿಸುವಂತೆ ಕ್ರಮವಹಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಆದರೆ, ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಅಧಿಕೃತ ಆದೇಶ ಹೊರಡಿಸುವುದು ಬಾಕಿ ಉಳಿದುಕೊಂಡಿದೆ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು, ಅದನ್ನು ಸಕಾಲದಲ್ಲಿ ಹಿಂದಿರುಗಿಸಲಾಗದಿದ್ದ ಸಂದರ್ಭ ನ್ಯಾಯಾಲಯದ ಮಧ್ಯಸ್ಥಿಕೆಯಿಲ್ಲದೆ ಸರ್ಫೇಸಿ ಕಾಯಿದೆ ಬಳಸಿಕೊಂಡು ಕೃಷಿ ಹೊರತುಪಡಿಸಿ ಇತರ ಆಸ್ತಿಯನ್ನು ಮಾರಾಟ ಮಾಡಲು ಅವಕಾಶವಿತ್ತು. ಇದಕ್ಕೆ ಸಂಬAಧಿಸಿದAತೆ ಕೊಡಗು ಸೇರಿದಂತೆ ಕಾಫಿ ಬೆಳೆಯುವ ರಾಜ್ಯದ ನೂರಾರು ರೈತರ ತೋಟಗಳು, ಕೃಷಿಕರ ಗಮನಕ್ಕೆ ಬಾರದೆ ಹರಾಜು ಪ್ರಕ್ರಿಯೆಗೆ ಒಳಗಾಗಿದ್ದ ಉದಾಹರಣೆಗಳು ಕಂಡುಬAದಿದ್ದವು. ಹಲವು ಪತ್ರಿಕೆ ಪ್ರಕಟಣೆಗಳ ಜಾಹೀರಾತುಗಳು ಕೂಡ ಪ್ರಕಟಗೊಂಡಿದ್ದವು. ವಿಶ್ವದ ಯಾವುದೇ ಅರ್ಹ ವ್ಯಕ್ತಿ ಹರಾಜು ಮೂಲಕ ಕಾಫಿ ತೋಟಗಳನ್ನು ಆನ್‌ಲೈನ್ ಮೂಲಕ ಖರೀದಿಸುವ ಅವಕಾಶವೂ ಇತ್ತು.

ಇದಕ್ಕೆ ತೀವ್ರ ವಿರೋಧ ಬೆಳೆಗಾರರ ವಲಯದಿಂದ ವ್ಯಕ್ತವಾಗುತಿತ್ತು. ಅನ್ಯ ರಾಜ್ಯ, ರಾಷ್ಟçದವರು ತೋಟ ಖರೀದಿಸುವುದರಿಂದ ಸ್ಥಳೀಯ ಜನಜೀವನದ ಜೊತೆಗೆ ಸಂಸ್ಕೃತಿಯ ಮೇಲೂ ಧಕ್ಕೆ ಬರುತ್ತದೆ. ಕೊಡಗಿನ ಅಸ್ತಿತ್ವ ಕಳೆದುಕೊಳ್ಳುವಂತಾಗುತ್ತದೆ ಎಂಬ ಭಯವೂ ಸೃಷ್ಟಿಯಾಗಿತ್ತು.

ಸಾಲ ಪಡೆದ ವ್ಯಕ್ತಿಗೆ ನೋಟಿಸ್ ಜಾರಿಯಾಗಿ ೬೦ ದಿನದೊಳಗೆ ಸಾಲ ಮರುಪಾವತಿ ಮಾಡದಿದ್ದಲ್ಲಿ ಆಸ್ತಿಯನ್ನು ವಶಪಡಿಸಿಕೊಂಡು ಹರಾಜು ಮಾಡಬಹುದಿತ್ತು. ಇದರಿಂದ ಜಿಲ್ಲೆಯ ಸಣ್ಣ, ಅತೀ ಸಣ್ಣ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿಕೊಂಡಿದ್ದರು. ಕರ್ನಾಟಕ ಒಂದೇ ರಾಜ್ಯದಲ್ಲಿ ಕಾಫಿ ಕೃಷಿ ವಾಣಿಜ್ಯ ಬೆಳೆ ಎಂಬ ಕಾರಣಕ್ಕೆ ಸರ್ಫೇಸಿ ಕಾಯಿದೆಗೆ ತುತ್ತಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ನೇತೃತ್ವದ ನಿಯೋಗ ವಿತ್ತ ಸಚಿವರನ್ನು ಭೇಟಿಯಾಗಿ ಸರ್ಫೇಸಿ ಕಾಯಿದೆಯ ಕರಾಳತೆಯನ್ನು ವಿವರಿಸಿದರು. ಸಾಲ ಪಡೆದ ಶೇ ೯೫ಕ್ಕೂ ಹೆಚ್ಚು ಭಾಗ ಸಣ್ಣ, ಅತೀ ಸಣ್ಣ ಕಾಫಿ ಬೆಳೆಗಾರರಿಗೆ ಇದರಿಂದಾಗುವ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು. ಅಲ್ಲದೆ ಕೆಲವು ಬ್ಯಾಂಕರ್‌ಗಳು ಹಾಗೂ ಮಧ್ಯವರ್ತಿಗಳು ಈ ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಗಮನಕ್ಕೆ ತಂದಿದ್ದರು.

ಅಹವಾಲು ಆಲಿಸಿದ ನಿರ್ಮಲ ಸೀತಾರಾಮನ್ ಅವರು, ಕಾಫಿ ಕೃಷಿ ಸಾಲದ ವಸೂಲಾತಿಗೆ ಸರ್ಫೇಸಿ ಕಾಯಿದೆ ಬಗ್ಗೆ ಪರಿಶೀಲಿಸಿ ಇದೀಗ ಕೂಡಲೇ ಜಾರಿಗೆ ಬರುವಂತೆ ಆನ್‌ಲೈನ್ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಬ್ಯಾಂಕ್‌ಗಳಿಗೆ ಸೂಚಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಸಂಸದರಾದ ಡಾ. ಸಿ.ಎನ್. ಮಂಜುನಾಥ್, ವಿಶ್ವೇಶ್ವರ ಹೆಗಡೆ ಕಾಗೇರಿ, ಮಲ್ಲೇಶ್ ಇದ್ದರು.

ಗಮನ ಸೆಳೆದಿದ್ದ ಕೆಜಿಎಫ್

ಆನ್‌ಲೈನ್ ಹರಾಜು ಸ್ಥಗಿತ ಆದೇಶವನ್ನು ಕರ್ನಾಟಕ ಗ್ರೋರ‍್ಸ್ ಫೆಡರೇಷನ್ (ಕೆಜಿಎಫ್) ಸ್ವಾಗತಿಸಿದೆ. ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಅವರ ನೇತೃತ್ವದ ನಿಯೋಗ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಭೂಪೇಂದ್ರ ಯಾದವ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಡಾ. ಮಂಜುನಾಥ್ ಹಾಗೂ ಹಲವು ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಫೇಸಿ ಕಾಯಿದೆಯ ಅನಾನುಕೂಲತೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಒದಗಿಸಿತ್ತು. ಬಳಿಕ ಜನಪ್ರತಿನಿಧಿಗಳ ನಿಯೋಗ ವಿತ್ತ ಸಚಿವರನ್ನು ಭೇಟಿಯಾದ ಪರಿಣಾಮ ಇದೀಗ ಸ್ಥಗಿತಕ್ಕೆ ಸರಕಾರ ಮನಸ್ಸು ಮಾಡಿದೆ. ಜನಪ್ರತಿನಿಧಿಗಳ ಭೇಟಿಯಾದ ನಿಯೋಗದಲ್ಲಿ ಕೆಜಿಎಫ್ ಉಪಾಧ್ಯಕ್ಷ ಕೆ.ಕೆ. ವಿಶ್ವನಾಥ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಕೆ.ಯು. ರತೀಶ್, ಹೆಚ್‌ಡಿಪಿಎ ಖಜಾಂಚಿ ಎಂ.ಜೆ. ಸಚಿನ್ ಹಾಗೂ ಮೂಡಿಗೆರೆ ತಾಲೂಕು ಕಾರ್ಯದರ್ಶಿ ಕೆ.ಡಿ. ಮೋಹನ್ ಇದ್ದರು.