ಸೋಮವಾರಪೇಟೆ, ಫೆ. ೧೨: ಸರ್ವಧರ್ಮ ಕ್ಷೇತ್ರ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಜಾತ್ರೋತ್ಸವದ ಅಂಗವಾಗಿ ಮುಕ್ತ ಜಿಲ್ಲಾ ಮಟ್ಟದ ಫುಟ್ಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ತಾ.೧೩ ಮತ್ತು ೧೪ ರಂದು ನಡೆಯಲಿದ್ದು, ಟ್ರೋಫಿಗಳ ಅನಾವರಣ ಮೈದಾನದ ವೇದಿಕೆಯಲ್ಲಿ ನಡೆಯಿತು.

ಫುಟ್ಬಾಲ್ ವಿಜೇತರಿಗೆ ಮೊದಲ ಬಹುಮಾನ ೧,೧೧,೧೧೧ ರೂ, ದ್ವಿತೀಯ ಬಹುಮಾನ ೫೫,೫೫೫ ರೂ. ಹಾಗೂ ಟ್ರೋಫಿ ನೀಡಲಾಗುತ್ತದೆ. ಮಹಿಳೆಯರಿಗೆ ನಡೆಯುವ ಥ್ರೋಬಾಲ್ ಪಂದ್ಯದ ವಿಜೇತರಿಗೆ ೨೨,೨೨೨ ರೂ. ಹಾಗೂ ದ್ವಿತೀಯ ರೂ. ೧೧,೧೧೧ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ತಾ. ೧೪ ರಂದು ಮುಕ್ತ ಗುಡ್ಡಗಾಡು ಓಟದ ಸ್ಪರ್ಧೆ ಬೆಳಿಗ್ಗೆ ೮ಕ್ಕೆ ಪ್ರಾರಂಭಗೊಳ್ಳಲಿದೆ. ತಾ.೧೩ರಂದು ಬೆಳಿಗ್ಗೆ ಜಾತ್ರಾ ಉದ್ಘಾಟನೆಯನ್ನು ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಮಂಜುನಾಥ್ ನೆರವೇರಿಸಲಿದ್ದಾರೆ. ಬೆಳಿಗ್ಗೆ ೧೦ ಗಂಟೆಗೆ ಜಾತ್ರಾ ಆವರಣದಲ್ಲಿ ಪಶುಚಿಕಿತ್ಸಾ ಶಿಬಿರ ನಡೆಯಲಿದೆ. ೧೦.೩೦ಕ್ಕೆ ಮುಕ್ತ ಪುಟ್ಭಾಲ್ ಪಂದ್ಯಾಟವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಲಿದ್ದಾರೆ. ತಾ. ೧೪ ರಂದು ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈತ ಹೋರಾಟಗಾರ ಜಿ.ಎಂ.ಹೂವಯ್ಯ, ದೇವಾಲಯ ಸಮಿತಿ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಜಾವಲೀನ್ ಥ್ರೋ ಕ್ರೀಡಾಪಟು ಡಿ.ಆರ್.ಅನೀಶ್ ಅವರನ್ನು ಸನ್ಮಾನಿಸಲಾಗುತ್ತದೆ.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಸಿಮೆಂಟ್ ಮಂಜು, ಹರೀಶ್‌ಗೌಡ, ಮಾಜಿ ಸಚಿವ ಬಿ.ಎ.ಜೀವಿಜಯ, ಎಂ.ಪಿ.ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.