ಮಡಿಕೇರಿ, ಫೆ. ೧೨: ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಆರೋಗ್ಯ ಹಕ್ಕು ಜಾರಿಗೆ ಒತ್ತಾಯಿಸಿ ರಾಜ್ಯವ್ಯಾಪಿ ಜಾಥಾ ಕೈಗೊಳ್ಳಲಾಗಿದೆÀ ಎಂದು ಬೇರು-ಬೆವರು ಸಾಂಸ್ಕೃತಿಕ ಬಳಗದ ಸಂಚಾಲಕ ಸೊರಪಲ್ಲಿ ಚಂದ್ರಶೇಖರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ವಿಷಯ ಸರಕಾರದ ಯೋಜನೆ ಗಳಾಗಬಾರದು. ಬದಲಾಗಿ ಹಕ್ಕಾಗಿ ಪರಿವರ್ತನೆಗೊಳ್ಳಬೇಕು. ಕೇರಳ, ತಮಿಳುನಾಡು, ರಾಜಸ್ತಾನದಲ್ಲಿರುವಂತೆ ಕರ್ನಾಟಕದಲ್ಲಿಯೂ ಉಚಿತ ಔಷಧಿ, ಗುಣಮಟ್ಟದ ಚಿಕಿತ್ಸೆ ಲಭಿಸಬೇಕು. ಸರಕಾರಿ ವೈದ್ಯರುಗಳು ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವ ಕ್ರಮವನ್ನು ಮೊದಲು ಕೈಬಿಡಬೇಕು. ಆರೋಗ್ಯ ಹಕ್ಕು ಕಾಯಿದೆ ಜಾರಿಯಾಗಬೇಕು. ಸರಕಾರಿ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದ್ದು, ಇದನ್ನು ತಡೆಗಟ್ಟಬೇಕು. ಸಂವಿಧಾನದಲ್ಲೂ ಕೂಡ ಆರೋಗ್ಯ ನೀತಿ ಬರಬೇಕೆಂಬ ಪ್ರಸ್ತಾಪವಿದ್ದು, ಇದನ್ನು ಕಾರ್ಯಗತಗೊಳಿಸಬೇಕು. ಸರಕಾರಿ ಆಸ್ಪತ್ರೆಯಲ್ಲಿರುವ ತಪಾಸಣೆಗಳ ಬೆಲೆಯನ್ನು ಸರಕಾರವೇ ನಿಯಂತ್ರಿಸಬೇಕು. ಈ ಹಕ್ಕಿನ ಕುರಿತು ಗಮನ ಸೆಳೆಯುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಜಾಥಾ ನಡೆಸಲಾಗುತ್ತಿದ್ದು, ಮಡಿಕೇರಿಯಲ್ಲಿ ಜಾಥಾ ಮಾಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಮುಂದೆ ಮೈಸೂರಿಗೆ ಸಾಗಲಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಬುಡಕಟ್ಟು ಕಾರ್ಮಿಕ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು, ಸದಸ್ಯರುಗಳಾದ ಜೆ.ಆರ್. ಭವ್ಯ, ಕೊಟ್ಟ, ಪಿ.ಬಿ. ಗೀತಾ, ಗಂಗೆ ಮಾಯಮುಡಿ ಹಾಜರಿದ್ದರು.