ಸಿದ್ದಾಪುರ, ಫೆ. ೧೨: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೧ ಕೋಟಿ ವೆಚ್ಚದಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು.

ಮಾಲ್ದಾರೆಯ ಮೈಲಾಪುರದಿಂದ ಬಾಡಗ-ಗೂಡ್ಲುರು ರಸ್ತೆ ಅಭಿವೃದ್ಧಿ, ಕಾಡಂಗಡಿ ಜನತಾ ಕಾಲೋನಿ-ಗುಡ್ಲೂರು ಮೂಡಬೈಲು ಆದಿವಾಸಿಗಳ ಹಾಡಿಗೆ ತೆರಳುವ ಹಾಗೂ ಚೆನ್ನಯ್ಯನಕೋಟೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೀರಾಜಪೇಟೆ ಕ್ಷೇತ್ರದಲ್ಲಿ ವಿವಿಧ ರಸ್ತೆಗಳ ಕಾಮಗಾರಿಗಳು ನಡೆಯುತ್ತಿದ್ದು, ಇದೀಗ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಯೋಜನೆ ಅಡಿಯಲ್ಲಿ ೬ ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಇನ್ನಿತರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಹಾಗೂ ಸದಸ್ಯರುಗಳಾದ ಹನೀಫ್, ಇಸ್ಮಾಯಿಲ್, ಮೊಹಮ್ಮದ್ ಅಲಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಹನೀಫ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅನಿಲ್ ಸೀನಪ್ಪ, ಚೇಕು, ಇನ್ನಿತರರು ಹಾಜರಿದ್ದರು.