ಮಡಿಕೇರಿ, ಫೆ. ೧೨: ಕೊಡಗಿನಲ್ಲಿ ಗುತ್ತಿಗೆದಾರರಿಗೆ ಸರಕಾರದಿಂದ ರೂ. ೧೮೦ ಕೋಟಿ ಸಂದಾಯವಾಗಬೇಕಾಗಿದೆ. ಪ್ರಾಕೃತಿಕ ವಿಕೋಪದಂತ ಸಂದರ್ಭದಲ್ಲಿ ಮಾಡಿದ ಕೆಲಸಗಳ ಬಿಲ್‌ಗಳನ್ನೂ ಮಂಜೂರು ಮಾಡಿಲ್ಲ ಎಂದು ಕಿಡಿಕಾರಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ , ರಾಜ್ಯದಲ್ಲಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ೩೭ ಸಾವಿರ ಕೋಟಿಯನ್ನು ಏಕಕಂತಿನಲ್ಲಿ ಪಾವತಿಸಬೇಕು. ಕೂಡಲೇ ಎಲ್ಲ ಗುತ್ತಿಗೆದಾರರ ಅಧಿಕೃತ ಸಭೆ ನಡೆಸಬೇಕು ಎಂದು ಒತ್ತಾಯಿಸಿ ಮಾರ್ಚ್ ೫ ರಂದು ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನದಲ್ಲಿ ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ನಗರದ ಸುದರ್ಶನ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬAಧ ಈಗಾಗಲೆ ೧೦೦ ಪುಟಗಳ ಪತ್ರ ಬರೆಯಲಾಗಿದೆ. ಆದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸರ್ಕಾರ ಬರಲು ನಮ್ಮ ಹೋರಾಟ ಸ್ವಲ್ಪಮಟ್ಟಿಗಾದರೂ ಕಾರಣವಾಗಿತ್ತು ಎನ್ನುವುದನ್ನು ಮರೆಯಬಾರದು. ಆದರೆ, ಹೊಸ ಸರ್ಕಾರ ಬಂದು ಎರಡೂವರೆ ವರ್ಷ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ. ಗುತ್ತಿಗೆದಾರರನ್ನು ಸರಕಾರ ನಿರ್ಲಕ್ಷಿಸಿದೆ. ಹಣ, ಆಸ್ತಿ ಅಡವಿಟ್ಟು, ಸಾಲ ಮಾಡಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಈಗ ಸ್ಥಳೀಯವಾಗಿ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ. ಹೊರರಾಜ್ಯದಿಂದ ಬಂದವರು ಪ್ಯಾಕೇಜ್ ರೂಪದಲ್ಲಿ ಕೆಲಸ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಗುತ್ತಿಗೆದಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಪದಾಧಿಕಾರಿಗಳಾದ ಕೃಷ್ಣ, ಎ.ಜಿ.ಸುರೇಶ್, ಸಣ್ಣೇಗೌಡ, ಎಂ.ಕೆ. ಚಂಗಪ್ಪ, ರವೀಂದ್ರ ರೈ, ಕೆ.ಬಾಬು ಭಾಗವಹಿಸಿದ್ದರು