ಮಡಿಕೇರಿ, ಫೆ. ೧೧: ಹಿರಿಯರು, ಜನಪದರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವು ಸಾಗದಿರುವುದರಿಂದ ಬದುಕು ಸೊಗಸಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್ ಅಭಿಪ್ರಾಯಿಸಿದರು.

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಬೆಸೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಸಂಪಾಜೆ ಸಣ್ಣಯ್ಯ ಪಟೇಲ್ ಮತ್ತು ದಿವಂಗತ ವಿ.ಎಸ್ ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಮನುಷ್ಯ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ಸಂಘ ಜೀವಿಯಾಗಿ ಬದುಕುವುದರಲ್ಲಿ ಸುಖ ಸಂತೋಷ ಇದೆ. ಅದನ್ನು ಜನಪದರು ಸಾಬೀತು ಮಾಡಿದ್ದರು. ಜನಪದ ಜಗತ್ತು ಎನ್ನುವುದು ಒಂದು ಅದ್ಭುತ, ವೈಶಿಷ್ಟö್ಯಮಯ. ಪೂರ್ವಜರು ಶಿಕ್ಷಣವಂತರಲ್ಲ. ಆದರೆ, ಬದುಕಿನ ಜೀವನೋತ್ಸಾಹದಲ್ಲಿ ಎಲ್ಲಾ ಅನುಭವದ ಪಾಠವನ್ನು ಪಡೆದವರು. ಜನಪದರ ಅನುಭವ ಮತ್ತು ಸಹಜ ಸ್ಫೂರ್ತಿಯಿಂದ ಹೊರಹೊಮ್ಮಿದ ಅನೇಕ ನುಡಿಮುತ್ತುಗಳು, ಗಾದೆ, ಹಾಡು, ಒಗಟು, ಕಥೆ, ಆಚರಣೆ ಇವೆಲ್ಲವೂ ನಮ್ಮ ಹಿಂದಿನ ಜನರ ಜೀವಕೋಶದ ಭಾಗ ಎಂದರು. ಜಿ.ಎಸ್ ಶಿವರುದ್ರಪ್ಪನವರ ನೂರನೇ ಜನ್ಮದಿನದ ಹಿನ್ನೆಲೆ ಅವರ ಸಾಹಿತ್ಯ ಸೇವೆಯನ್ನು ವಿವರಿಸಿ, ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ದಿ. ವಿ.ಎಸ್. ರಾಮಕೃಷ್ಣ ಅವರÀ ದತ್ತಿ ಆಶಯದಂತೆ ಕನ್ನಡ ಸಾಹಿತ್ಯದ ಬೆಳವಣಿಗೆ ಕುರಿತು ಶನಿವಾರಸಂತೆಯ ಸಾಹಿತಿ ಲಾವಣ್ಯ ಮೋಹನ್ ಮಾತನಾಡಿದರು. ಸಾಹಿತ್ಯದ ಹಲವು ಪ್ರಕಾರಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದ ಅವರು ಹಳೆಗನ್ನಡದಿಂದ ಇಂದಿನ ನವ್ಯ ಕನ್ನಡದವರೆಗಿನ ವಿಚಾರಗಳ ಕುರಿತು ಮಾಹಿತಿ ಒದಗಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಹಳ್ಳಿ ಶಾಲೆಯ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಬೇರುಗಳಂತೆ. ಅವರು ಕನ್ನಡ, ನಾಡು-ನುಡಿ, ಆಚಾರ, ವಿಚಾರ, ಸಾಹಿತ್ಯ, ಸಂಸ್ಕೃತಿ ತಿಳಿಯಪಡಿಸಬೇಕಿದೆ ಆ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.

ಶ್ರೀ ಬಾಲ ತ್ರಿಪುರ ಸುಂದರಿ ದೇವಾಲಯದ ಅಧ್ಯಕ್ಷ ಎನ್.ವೈ. ಧರ್ಮಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ ವಹಿಸಿದ್ದರು ಶಾಲಾ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ಧರ್ಮಪ್ಪ, ಕೊಡ್ಲಿಪೇಟೆಯ ಶಿಕ್ಷಕ ಕಿರಣ್ ಕುಮಾರ್ ಮತ್ತು ನ್ಯಾಯದ ಹಳ್ಳ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಮಂಜುಳಾಮಣಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಬಾಲ ತ್ರಿಪುರ ಸುಂದರಿ ದೇವಾಲಯದ ಕಾರ್ಯದರ್ಶಿ ದೇವೇಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಂಜುಳಾ ಎಸ್.ಎಸ್. ಮತ್ತು ದೇವೇಂದ್ರ ಉಪಸ್ಥಿತರಿದ್ದರು ಬೆಸೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್ ದೇವರಾಜು ಸ್ವಾಗತಿಸಿದರು. ಅಧ್ಯಾಪಕಿ ಭಾರತಿ ಕಾರ್ಯಕ್ರಮವನ್ನು ನಿರೂಪಿಸಿದರು