ಮಾನವ ನಿರ್ಮಿತ ಪರಿಸರದ ಭಾಗವೇ ಸಂಸ್ಕೃತಿ ಎಂಬ ಮಾತೊಂದಿದೆ. ಪರಿಸರದ ಎಲ್ಲ ಕ್ರಿಯೆಗಳು ಮಾನವ ಪ್ರಜ್ಞೆಯಲ್ಲಿ ಬಹುರೂಪಿಯಾದ ಸಂವೇದನೆಯನ್ನು ಬಿತ್ತಿವೆ. ಕೃಷಿ ಯುಗವು ಪರಿಸರವನ್ನು ಕೃಷೀಕರಿಸುತ್ತಲೇ ಸಮುದಾಯಗಳಿಗೆ ಅವಶ್ಯವಿದ್ದ ನೆಲೆನಿಲ್ಲುವ ನಂಬಿಕೆಯನ್ನು ಬೆಳೆಸಿದೆ. ಋತುಮಾನದ ವ್ಯತ್ಯಾಸದಂತೆ ಬಿಡಿಯಾದ ದೈವಗಳು ಉಗಮಗೊಂಡರೆ; ಪರಿಸರ ದೈವವು ಇಡೀ ಜೈವಿಕ ಪರಿಸರವನ್ನೇ ವಿಶಾಲವಾದ ಸಮಷ್ಟಿಯಾದ ದೈವಾರ್ಥದಲ್ಲಿ ಕಲ್ಪಿಸಿದೆ. ಮಾನವ ಪರಿಸರದ ಕೈಗೊಂಬೆ ಎನ್ನುವುದು ಈ ಕಾರಣಕ್ಕಾಗಿಯೇ. ಪರಿಸರದ ಅನುಭಾವದಿಂದಲೇ ಸಂಸ್ಕೃತಿ ಆಕಾರಗೊಳ್ಳುತ್ತದೆ. ಸಮುದಾಯಗಳಿಗೆ ಪರಿಸರದ ವಿವೇಕವು ಬೇರಾಗಿದ್ದರೆ ಸಂಸ್ಕೃತಿಯು ಭಾ಼ಷೆಯ ಸೌಂದರ್ಯವಾಗಿರುತ್ತದೆ.

ಪರಿಸರವನ್ನು ಹೊರತುಪಡಿಸಿ ಸಂಸ್ಕೃತಿಯ ಯಾವೊಂದು ಕ್ರಿಯೆಯೂ ನಡೆಯುವುದಿಲ್ಲ. ಮಾನವ ತನ್ನ ಅಗತ್ಯಕ್ಕೆ ಅನುರೂಪವಾಗುವಂತೆ ಪರಿಸರವನ್ನು ಅಳವಡಿಸಿಕೊಳ್ಳುವಾಗ ನಿಸರ್ಗದ ಗುಣವನ್ನೇ ದೈವಕ್ಕೂ ಹೊಂದಿಸಿಕೊAಡಿದ್ದಾನೆ. ಅದರಂತೆ ನಿಸರ್ಗದ ಪ್ರಮುಖ ಅಂಶಗಳಲ್ಲಿ ದೈವತ್ವವನ್ನು ಕಾಣುತ್ತಾ ಪೂಜಿಸುವ ಆರಾಧಿಸುವ ಆ ಮೂಲಕ ಸಂತೃಪ್ತಿಪಡಿಸುವ ಕ್ರಮವನ್ನು ಕಂಡುಕೊAಡಿದ್ದಾನೆ. ಈ ಹಿನ್ನೆಲೆಯಲ್ಲಿ ಹಲವು ಆಚರಣೆಗಳು ಹುಟ್ಟಿಕೊಂಡಿವೆ. ಅಂತಹ ಆಚರಣೆಗಳಲ್ಲಿ ಕೊಡಗಿನ ಕೊಡವ ಜನಪದರು ಆಚರಿಸುವ ಬೇದ ಚಂಗ್ರಾದಿಯು ಒಂದು. ಮೂಲತಃ ಇದೊಂದು ಫಲವಂತಿಕೆಯ ಆಚರಣೆ. ಸೃಷ್ಟಿಯನ್ನು ಪ್ರತಿ ಸೃಷ್ಟಿಸುವ ಅರಿವಿನ ಕ್ರಮದಲ್ಲಿ ಫಲವಂತಿಕೆಯ ದೈವಾಚರಣೆಗಳು ಹುಟ್ಟಿಕೊಂಡಿವೆ. ನಿಸರ್ಗದ ಎಲ್ಲ ವ್ಯವಸಾಯವೂ ಫಲಿತಗೊಳ್ಳುವುದು ಸೃಷ್ಟಿಗೆ ಬದ್ಧವಾದ ಕ್ರಿಯೆಗಳಿಂದಲೇ. ಜನನ ಮರಣಗಳ ಆವರ್ತನದ ಪ್ರಜ್ಞೆ ಬಂದಿದ್ದರಿAದ ಹೆಣ್ಣು-ಗಂಡಿನ ಕೂಡಿಕೆಯ ಪ್ರವೃತ್ತಿ ಮನವರಿಕೆಯಾಗಿದ್ದರಿಂದ ಕೃಷಿಯ ಕ್ರಿಯೆಯೂ ದೈವಿಕ ಆಯಾಮವೆಂದೇ ತಿಳಿದವು. ಆದ್ದರಿಂದಲೇ ಭೂಮಿ ಮತ್ತು ಆಕಾಶಕ್ಕೆ ಪುರುಷ ಮತ್ತು ಪ್ರಕೃತಿಯ ಸಂಬAಧವೇರ್ಪಟ್ಟು ಹೆಣ್ಣುಗಂಡಿನ ಕೂಡುವಿಕೆಯ ಕ್ರಿಯೆಯಲ್ಲಿ ಮಳೆ ಮತ್ತು ಬೆಳೆ ಎಂಬ ಸಾಂಸ್ಕೃತಿಕ ರೂಪಕಗಳು ಸೇರಿಕೊಂಡಿವೆ.

ಪುರಾಣಗಳ ಪ್ರಕಾರ ಹೆಣ್ಣು ರಜಸ್ವಲೆಯಾಗುವುದು ಇಂದ್ರನ ಬ್ರಹ್ಮಾಹತ್ಯಾ ದೋಷದಲ್ಲಿ ಒಂದು ಪಾಲನ್ನು ಆಕೆ ಪಡೆದುದರಿಂದ ಎನ್ನಲಾಗುತ್ತದೆ. ವಿಶ್ವರೂಪಾಚಾರ್ಯನ ವಧೆಯಿಂದ ಪ್ರಾಪ್ತವಾದ ಬ್ರಹ್ಮಹತ್ಯಾ ದೋಷವನ್ನು ನಾಲ್ಕು ಪಾಲು ಮಾಡಿ ಭೂಮಿ, ನದಿ, ವೃಕ್ಷ ಹಾಗೂ ಸ್ತಿçÃ- ಇವರಿಗೆ ಹಂಚಲಾಯಿತು.ಈ ಕಾರಣಕ್ಕಾಗಿ ಭೂಮಿತಾಯಿ ವರ್ಷಕೊಮ್ಮೆ ಬಹಿಷ್ಠೆಯಾಗುತ್ತಾಳೆ ಎಂಬುದು ಪೌರಾಣಿಕ ನಂಬಿಕೆ. ಆದರೆ ಭೂದೇವಿಯ ಈ ದೋಷ ಈ ಲೋಕಕ್ಕೆ ಶುಭವಾದುದು ಎಂಬುದು ಬೇದಚಂಗ್ರಾAದಿಯAತಹ ಆಚರಣೆಗಳಿಂದ ವೇದ್ಯವಾಗುತ್ತದೆ.

‘ಬೇಧ ಚಂಗ್ರಾAದಿ’ ಭೂಮಿತಾಯಿ ಋತುಮತಿಯಾಗುವ ಕಾಲ ಎಂಬುದು ಜನಪದರ ಗ್ರಹಿಕೆ. ‘ಬೇಧ’-ಈ ಶಬ್ದ ನಿಷ್ಪತ್ತಿಯ ಕುರಿತು ಸರಿಯಾದ ನಿರ್ವಚನ ಲಭ್ಯವಿಲ್ಲ. ಆದರೆ ಬೀಜ ಬಿತ್ತವುದು, ಬಿತ್ತನೆ, ಬಿತ್ತನೆಗೆ ಹದವಾದ ಭೂಮಿ, ಬಿತ್ತನೆಗೆ ಹದವಾದ ಕಾಲ, ಹದ, ಪಕ್ವತೆ, ಕಾಮೋದ್ರೇಕ ಎಂಬ ಅರ್ಥಗಳಿರುವ ‘ಬೆದೆ’ ಪದದಿಂದ ‘ಬೇಧ’ ಶಬ್ದ ನಿಷ್ಪನ್ನಗೊಂಡಿರಬಹುದು. ಚಂಗ್ರಾAದಿ ಎಂದರೆ ಸಂಕ್ರಮಣ ಕಾಲ ಎಂದರ್ಥ. ಭೂದೇವಿ ಋತುವಾಗಿ ಬೀಜೋತ್ಪತ್ತಿಯ ನಿರೀಕ್ಷೆಯಲ್ಲಿರುವ ಸಂಕ್ರಮಣ ಕಾಲದ ಈ ಆಚರಣೆ ಋತುಮಾನಕ್ಕೆ ಸಂಬAಧಿಸಿದಾಗಿದ್ದು; ಮಾಲ್ಯಾರ್ (ಮಕರ) ಮಾಸದ ೨೮ನೇ ದಿನದಂದು (ಫೆ. ೧೧ ರಿಂದ) ಪ್ರಾರಂಭವಾಗಿದೆ. ಅದನ್ನು‘ಸುರು (ಮೊದಲ) ಬೇಧ’ವೆಂದು ಕರೆಯಲಾಗುತ್ತದೆ. ೨೯ ನೇ ದಿನ (ತಾ. ೧೨ ರಂದು) ‘ನಡು ಬೇಧ’ವಾದರೆ ಕುಂಬ್ಯಾರ್ (ಕುಂಭ) ಮಾಸದ ಒಂದನೇ ದಿನ (ತಾ. ೧೩ ರಂದು) ‘ಆಕೀರಿ/ಕಡೇ (ಕೊನೆಯ) ಬೇಧ’. ಹೀಗೆ ಮೂರು ದಿನಗಳ ಕಾಲ ನಡೆಯುವ ಈ ಆಚರಣೆಯನ್ನು ಗಮನಿಸಿದರೆ ಇದರ ಹಿನ್ನೆಲೆಯಲ್ಲಿ ಹುದುಗಿರುವುದು ಪ್ರಕೃತಿ ಆರಾಧನೆ ಹಾಗೂ ಪ್ರಾಚೀನ ಸಾಂಸ್ಕೃತಿಕ ಆಶಯವಾದ ಫಲೀಕರಣದ ಆಕಾಂಕ್ಷೆ ಎಂಬುದು ಸ್ಪಷ್ಟವಾಗುತ್ತದೆ. ಭೂಮಿದೇವಿ ವರ್ಷಕೊಮ್ಮೆ ಮುಟ್ಟಾಗುವ ಬೇಧ ಚಂಗ್ರಾAದಿಯ ಆ ದಿನಗಳಲ್ಲಿ ಭೂಮಿಯನ್ನು ಅಗೆಯುವುದು, ಉಳುವುದು ಇತ್ಯಾದಿ ಭೂಹಿಂಸೆಯನ್ನು ಮಾಡಕೂಡದು ಎಂಬ ಪ್ರತೀತಿ ಇದೆ. ಪೂರ್ವದಲ್ಲಿ ಒಬ್ಬಾತ ನೆಲವನ್ನು ಅಗೆದಾಗ ರಕ್ತ ಒತ್ತರಿಸಿ ಬಂದಿತ್ತAತೆ! ಬಹಿಷ್ಟೆಯಾದಾಗ ಭೂಮಿಗೆ ನೋವಾದರೆ ಆಕೆ ಬಂಜೆಯಾಗುತ್ತಾಳೆ. ಹಾಗಾಗಿ ಆ ವರ್ಷ ಉತ್ತಮ ಬೆಳೆ ಬರುವುದಿಲ್ಲ ಎಂದು ಭಾವಿಸಲಾಗುತ್ತದೆ. ರಜೋದರ್ಶನ ಸಂದರ್ಭದಲ್ಲಿ ಪುರುಷ ಸಂಪರ್ಕ ಸಲ್ಲದು ಎಂಬ ಧಾರ್ಮಿಕ ನಿಷೇಧದ ನೆರಳನ್ನು ಇಲ್ಲಿ ಕಾಣಬಹುದು. ನೇಗಿಲು, ನೊಗ, ಗುದ್ದಲಿಗಳ ಕೆಲಸಕ್ಕೆ ಆ ದಿನಗಳಲ್ಲಿ ಸಂಪೂರ್ಣ ವಿರಾಮ. ಗಾಡಿ ಎತ್ತುಗಳಿಗೂ ವಿಶ್ರಾಂತಿ.ಮರಗಿಡಗಳ ರೆಂಬೆ ಕೊಂಬೆಗಳನ್ನು ಕಡಿಯುವಂತಿಲ್ಲ.

ಸ್ತಿçÃಯರ ಕಲಾಪ

ಬೇಧ ಚಂಗ್ರಾAದಿಯಲ್ಲಿ ಹೆಣ್ಣುಮಕ್ಕಳ ಕಾರ್ಯಗಳೇ ಪ್ರಧಾನವಾದುದು. ಭೂತಾಯಿಯನ್ನು ಪೂಜಿಸುವುದರಲ್ಲಿ ಅವರದೇ ಸಡಗರ. ನಡುಬೇಧದ ದಿನದಂದು ಹೆಂಗಳೆಯರೆಲ್ಲಾ ಸೇರಿ ಭೂಮಿ ಪೂಜೆಗೆ ಬೇಕಾದ ವಸ್ತುಗಳೊಂದಿಗೆ ಗದ್ದೆಗೆ ತೆರಳುತ್ತಾರೆ. ನೆಲಕ್ಕೆ ಚಾಪೆಯನ್ನು ಹಾಸಿ ಅದರ ಮೇಲೆ ತಳಿಯತಕ್ಕಿ ಬೊಳ್‌ಚ(ದೀಪ)ವನ್ನು ಇರಿಸುತ್ತಾರೆ. ಗದ್ದೆಯ ಒಂದಿಷ್ಟು ಭಾಗವನ್ನು ಶುಚಿಗೊಳಿಸಿ ನೀರನ್ನು ಪ್ರೋಕ್ಷಿಸುತ್ತಾರೆ. ತೋರಳೆ/ ತೋರತೊಪ್ಪು ಎಂಬ ಬಳ್ಳಿಯ ಮೂರು ಎಲೆಗಳ ಮೇಲೆ ಅಕ್ಕಿ ಹಾಕಿ ಅವುಗಳನ್ನು ಶುಚಿಗೊಳಿಸಿದ ಜಾಗದಲ್ಲಿರಿಸಿ ಮಣ್ಣಿನ ದೀಪವನ್ನು ಹಚ್ಚಲಾಗುತ್ತದೆ. ನೆರೆದವರಲ್ಲಿ ಹಿರಿಯ ಮಹಿಳೆ ‘ಎಣ್ಣೆಚರ್‌ಕ್’ನಲ್ಲಿ ತಂದ ಹರಳೆಣ್ಣೆಯನ್ನು ಗದ್ದೆಯ ಒಂದು ಬದಿಗೆ ಹೊಯ್ದುಅದರ ಸಮೀಪ ಮರದ ಬಾಚಣಿಗೆಯನ್ನು ಇರಿಸಿ- “ಭೂಮಿತಾಯಿ ನೀಡ ಉಟ್ಟಿಮಂಡೆ ಕಾಂಜದ್ ತಂಪಾಡ್. ಕುಂಬ್ಯಾತ್ ಮಳೆಯಾಯಿ ಕುಂದ್‌ಲೂ ಕೂಳಾಡ್’’ ಎಂದು ಸ್ಮರಿಸಿ ಪೂರ್ವಾಭಿಮುಖವಾಗಿ ನಿಂತು ಪ್ರಾರ್ಥಿಸಿ ಅಕ್ಕಿ ಹಾಕುತ್ತಾರೆ.

‘ಆಕೀರಿ/ಕಡೇ(ಕೊನೆಯ) ಬೇಧ’

ಕೊನೆಯ ದಿನದಂದು ಮನೆಯ ಹೆಣ್ಣುಮಕ್ಕಳೆಲ್ಲಾ ಸೇರಿ ಅಡುಗೆ ಮಾಡಿ ಗುರು ಕಾರೋಣನಿಗೆ ಮೀದಿ ಇಟ್ಟು ನೆಲ್ಲಕ್ಕಿ ನಡುಬಾಡೆಯಲ್ಲಿ ಮನೆಯ ಹಿರಿಯ ಮಾತನಾಡಿ ಅಕ್ಕಿ ಹಾಕಿ ಒಕ್ಕದ ಏಳಿಗೆಗಾಗಿ ಪ್ರಾರ್ಥಿಸಲಾಗುತ್ತದೆ.

ಕಾಡ್‌ಬೋಟೆ ಮತ್ತು ಬೇದರಿಂಜ ಪಾಲ್

ಆದಿಮ ಮಾನವನ ಬದುಕಿನ ಪ್ರಧಾನ ಅಂಗವಾಗಿದ್ದ ಬೇಟೆ ಬೇಧ ಚಂಗ್ರಾAದಿಯ ಕ್ರಿಯಾಚರಣೆಯೊಂದಿಗೆ ಸೇರಿರುವುದು ಗಮನಾರ್ಹವಾದುದು. ಈ ಸಮಯದಲ್ಲಿ ಗಂಡಸರು ‘ಕಾಡ್ ಬೋಟೆ’ (ಕಾಡಿಗೆ ಹೋಗಿ ಬೇಟೆಯಾಡುವುದು) ಮತ್ತು ತೋಡ್ ಬೋಟೆ (ತೊರೆಗಳಲ್ಲಿ ಮೀನು ಬೇಟೆ) ಕಡ್ಡಾಯವಾಗಿತ್ತು. ಕಾಡು ಬೇಟೆಯಲ್ಲಿ ದೊರೆತ ಮಾಂಸವನ್ನು ಅದರಲ್ಲಿ ಭಾಗವಹಿಸಿದವರಿಗೆ ಅವರ ಶ್ರಮಕ್ಕೆ ಅನುಗುಣವಾಗಿ ಪಾಲು ಮಾಡಿ ಹಂಚಲಾಗುತಿತ್ತು. ಇದನ್ನು ‘ಬೇಧರಿಂಜ ಪಾಲ್’ ಎನ್ನುತ್ತಾರೆ.

ತೋಡ್‌ಬೋಟೆ

ವ್ಯವಸಾಯ ಪ್ರಧಾನವಾಗಿದ್ದ ಕೊಡಗಿನಲ್ಲಿ ಆರಂಭಕ್ಕೆ ಮೂಲವಾದ ತೊರೆ ಮತ್ತು ಹೊಳೆಗಳು ಜಲಚರಗಳಿಂದ ಸಮೃದ್ಧವಾಗಿರುತಿತ್ತು. ಬೇದ ಚಂಗ್ರಾAದಿಯ ಸಂದರ್ಭ ಸಾಧಾರಣವಾಗಿ ಮನೆಯ ಸಮೀಪದಲ್ಲೆ ಹರಿಯುವ ತೋಡು (ತೊರೆ)ಗಳಿಗೆ ಮದ್ದ್ ಹಾಕಿ ಮೀನು ಹಿಡಿಯುಲಾಗುತಿತ್ತು. ಕಾರೆಗಿಡದ ಕಾಯಿಯನ್ನು ಬೂದಿಯೊಂದಿಗೆ ಜಜ್ಜಿ ಪುಡಿಮಾಡಿ ತೋಡಿನ ನೀರಿಗೆ ಹಾಕಿದಾಗ ಅದರ ಘಾಟಿಗೆ ಮೀನುಗಳೆಲ್ಲ ತೇಲಿ ಮೇಲೆ ಬರುತ್ತಿದ್ದವು. ಅವುಗಳನ್ನು ಕೋರಿಯದಲ್ಲಿ ಹಿಡಿಯಲಾಗುತಿತ್ತು. ಇದಲ್ಲದೆ ತೋಡು, ಹೊಳೆಯ ಬದುವಿನಲ್ಲಿ ಬೆಳೆಯುವ ಚೂರಿ ಗಿಡದ ಕಾಂಡವನ್ನು ಬೂದಿಯೊಂದಿಗೆ ಅರೆದು ತೋಡಿನ ನೀರಿಗೆ ಕಲಸಿ ಮೀನು ಹಿಡಿಯುವ ಕ್ರಮವೂ ಇತ್ತು. ಹೀಗೆ ಸಿಕ್ಕಿದ ಮೀನುಗಳನ್ನು ಕಾಡು ಬೇಟೆಯಲ್ಲಿ ಅನುಸರಿಸುವ ‘ಬೇಧರಿಂಜ ಪಾಲ್’ನಂತೆಯೇ ಹಂಚಿಕೊಳ್ಳುತ್ತಿದ್ದರು. ಕೃಷಿ ಭೂಮಿಯೆಲ್ಲ ಸೈಟ್‌ಗಳಾಗಿ ಬದಲಾಗಿರುವ ಈ ದಿನಗಳಲ್ಲಿ ಇವುಗಳೆಲ್ಲ ಕೇವಲ ಹಿರಿಯರ ಸ್ಮೃತಿಪಟಲಗಳಲ್ಲಿ ಉಳಿದುಕೊಂಡ ವಿಚಾರಗಳಾಗಿವೆ.

ಬೇಧಕಾತ್

ಬೇಧ ಚಂಗ್ರಾAದಿಯ ಸಂದರ್ಭದಲ್ಲಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಕಾಣಿಸತೊಡಗುತ್ತದೆ. ಕೆಲವು ದಿನಗಳ ಮೊದಲೇ ಹಿತಕರವಾದ ಶೀತ ಗಾಳಿ ಬೀಸ ತೊಡಗುತ್ತದೆ. ಇದಕ್ಕೆ ‘ಬೇಧಕಾತ್’ (ಗಾಳಿ) ಎನ್ನುತ್ತಾರೆ. ಇದು ಮರ, ಗಿಡ, ಬಳ್ಳಿಗಳಿಗೆ ಹೊಟ್ಟೆಬರಿಸುವ ತೆನೆಗಾಳಿ, ಫಲೀಕರಣದ ಗಾಳಿ ಎಂಬ ಪ್ರತೀತಿ ಇದೆ. ಋತುಮತಿಯಾಗಿ ಸಫಲದಾತೆಯಾಗಲು ಎಳಸುವ ನೆಲದಾಯಿ ಬೇಧಕಾತ್‌ನ ಸುಖ ಸ್ಪರ್ಷದಿಂದ ಪುಳಕಿತಳಾಗುವಳು ಎಂಬ ನಂಬಿಕೆ ಕೊಡವ ಜನಪದರದು. ಹೀಗೆ ಪ್ರಕೃತಿಯ ಚೇತನೋದ್ದೀಪನ ಮತ್ತು ಫಲೀಕರಣದ ಆಶಯವನ್ನು ಹೊಂದಿರುವ ಬೇಧ ಚಂಗ್ರಾAದಿ ಮುಖ್ಯವಾಗಿ ಭೂಮಿ ತಾಯಿಯ ಮಕ್ಕಳಾದ ಕೊಡವ ಜನಪದರು ಅಕೆಯನ್ನು ಪೂಜಿಸಿ ಆರಾಧಿಸುವ ಆಚರಣೆಯಾಗಿದೆ.

- ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಸಹಾಯಕ ಪ್ರಾಧ್ಯಾಪಕರು, ಕಾವೇರಿ ಕಾಲೇಜು ಗೋಣಿಕೊಪ್ಪ, ಮೊ. ೯೪೮೦೯೦೫೭೫೬.