ಕರಿಕೆ, ಫೆ. ೧೧: ಜಿಲ್ಲೆಯ ಗಡಿಭಾಗದಲ್ಲಿ ಅಕ್ರಮವಾಗಿ ಬೀಟೆ ಮರ ಸಾಗಾಟ ಪ್ರಕರಣವನ್ನು ಬೇಧಿಸುವಲ್ಲಿ ಕೊಡಗು ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯ ಸಂಚಾರಿ ದಳ ಮಡಿಕೇರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರ ಮಡಿಕೇರಿ ಇವರ ಮಾರ್ಗದರ್ಶನದಲ್ಲಿ ಮತ್ತು ವಲಯ ಅರಣ್ಯ ಅಧಿಕಾರಿ ನೇತೃತ್ವದಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಅಶೋಕ್ ಲೈಲ್ಯಾಂಡ (ಏಂ ೪೫ ಂ ೦೯೬೧) ವಾಹನವನ್ನು ಹೆಬ್ಬಾಲೆ ಸಮೀಪದ ಹುಲಸೆ ಗ್ರಾಮದ ಕುಶಾಲನಗರ - ಕೊಣನೂರು ರಾಜ್ಯ ಹೆದ್ದಾರಿಯ ಸರ್ಕಾರಿ ಶಾಲೆಯ ಬಳಿ ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ. ಆರೋಪಿ ಹರೀಶ್ ಕುಮಾರ್ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಕೊಟ್ರೇಶ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಜಗದೀಶ್, ಹಾಲೇಶ, ಶ್ರೀನಿವಾಸ್, ಗುರುಪ್ರಸಾದ್, ವಾಹನ ಚಾಲಕರಾದ ಜನಾರ್ಧನ್, ಅಕ್ಷಯ್, ಸಿಬ್ಬಂದಿ ವರುಣ್ ಭಾಗವಹಿಸಿದ್ದರು. - ಸುಧೀರ್