ಪೊನ್ನಂಪೇಟೆ, ಫೆ. ೧೧: ಪೊನ್ನಂಪೇಟೆ ತಾಲೂಕಿನ ಬೆಸಗೂರು, ನಲ್ಲೂರು ಹಾಗೂ ಕೋಟೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ೭ ಜಾನುವಾರುಗಳನ್ನು ಕೊಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಜಾನುವಾರು ಭಕ್ಷಕ ೬ ವರ್ಷ ಪ್ರಾಯದ ಗಂಡು ಹುಲಿಯನ್ನು ರೋಚಕ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸೆರೆ ಹಿಡಿದ ಹುಲಿಯನ್ನು ಬನ್ನೇರುಘಟ್ಟ ರಾಷ್ಟಿçÃಯ ಉದ್ಯಾನವನಕ್ಕೆ ಬಿಡಲಾಗಿದೆ. ತಾ. ೮ ರಂದು ಬೆಸಗೂರಿನಲ್ಲಿ ಒಂದೇ ರಾತ್ರಿ ಬಾಚಮಾಡ ರಾಜಪ್ಪ ಅವರ ಎರಡು ಹಸುಗಳು, ಬಲ್ಲಿಮಾಡ ಸಂಪತ್ ಅವರ ತುಂಬು ಗರ್ಭಿಣಿ ಹಸು ಸೇರಿದಂತೆ, ಒಟ್ಟು ೩ ಹಸುಗಳನ್ನು ಈ ಹುಲಿ ಬಲಿ ತೆಗೆದುಕೊಂಡಿತ್ತು. ಈ ಸಂದರ್ಭ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಸೇರಿದಂತೆ, ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆಯ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.

ರೋಚಕ ಕಾರ್ಯಾಚರಣೆ

ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಅವರ ಸಲಹೆಯ ಮೇರೆಗೆ ತಾ. ೯ ರಂದು ಬೆಸಗೂರು ಗ್ರಾಮಕ್ಕೆ ಭೇಟಿ ನೀಡಿದ್ದ, ಕೊಡಗು ಸಿಸಿಎಫ್ ಸೋನಲ್ ವೃಷ್ಣಿ ಅವರು, ಹುಲಿಯ ಉಪಟಳದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾ.೧೦ ರಂದು ಜಾನುವಾರು ಹಂತಕ ಹುಲಿಯನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿತ್ತು.

ಸರ್ಕಾರ ಲಿಖಿತ ಆದೇಶ ನೀಡುತ್ತಿದ್ದಂತೆ ವ್ಯಾಘ್ರನ ಸೆರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಿಂದ ಭೀಮ ಹಾಗೂ ಹೆಚ್. ಡಿ. ಕೋಟೆ ತಾಲೂಕಿನ ಬಳ್ಳೆ ಸಾಕಾನೆ ಶಿಬಿರದಿಂದ ಮಹೇಂದ್ರ ಆನೆಯನ್ನು ಕರೆಸಿಕೊಂಡರು. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಚಿಂತಿಸಿದ ಅಧಿಕಾರಿಗಳು, ರಾತ್ರಿ ವೇಳೆಯಲ್ಲೂ ಕಾರ್ಯಾಚರಣೆಗೆ ಸಾಧ್ಯವಾಗುವಂತಹ ಎರಡು ಅತ್ಯಾಧುನಿಕ ಡ್ರೋನ್ ಕ್ಯಾಮರ ಹಾಗೂ ಪರಿಣಿತ ಡ್ರೋನ್ ಆಪರೇಟರ್‌ಗಳನ್ನು ಕರೆಸಿಕೊಂಡರು. ಶಾರ್ಪ್ ಶೂಟರ್, ಪಶು ವೈದ್ಯಾಧಿಕಾರಿ ಸೇರಿದಂತೆ ಸುಮಾರು ೮೦ಕ್ಕೂ ಹೆಚ್ಚು ಸಿಬ್ಬಂದಿ ಸಂಜೆ ವೇಳೆಗೆ ಸಕಲ ಸಿದ್ದತೆಯೊಂದಿಗೆ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಿದರು. ಸಂಜೆ ಸುಮಾರು ೭ ಗಂಟೆ ಸಮಯಕ್ಕೆ ಹೊಳೆ ಬದಿಯ ಪೊದೆಯಲ್ಲಿ ಹುಲಿ ಅಡಗಿರುವುದನ್ನು ಡ್ರೋನ್ ಕ್ಯಾಮರಾ ಪತ್ತೆ ಹಚ್ಚಿತು. ಹುಲಿ ಇರುವಿಕೆ ೪ಐದನೇ ಪುಟಕ್ಕೆ

ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಜಾನುವಾರು ಭಕ್ಷಕ ಹುಲಿ ಅದೇ ಎಂಬುದನ್ನು ಖಚಿತ ಪಡಿಸಿಕೊಂಡ ಕಾರ್ಯಾಚರಣೆ ತಂಡ ಅನತಿ ದೂರದಲ್ಲಿ ಇದ್ದ ಹಸುವಿನ ಕಳೇಬರವನ್ನು ತಿನ್ನಲು ಹುಲಿ ಬರಬಹುದು, ಆಗ ಅರವಳಿಕೆ ಪ್ರಯೋಗಿಸಲು ಸುಲಭವಾಗುತ್ತದೆ ಎಂದು ಹಸುವಿನ ಕಳೆಬರದ ಬಳಿ ಕಾದು ಕುಳಿತಿತ್ತು. ಹೊತ್ತು ಕಳೆದರೂ ಹುಲಿ ಅತ್ತ ಸುಳಿಯಲಿಲ್ಲವಾದರೂ ಹುಲಿ ಡ್ರೋನ್ ಕ್ಯಾಮರಾ ಕಣ್ಗಾವಲಿನಲ್ಲೇ ಇತ್ತು.

ಹಸುವಿನ ಕಳೇಬರದ ಪಕ್ಕ ಇದ್ದು ಸಮಯ ವ್ಯರ್ಥ ಮಾಡುವ ಬದಲು ಹುಲಿ ಇದ್ದಲ್ಲಿಗೆ, ಹೋಗುವ ನಿರ್ಧಾರ ಮಾಡಿದ ಕಾರ್ಯಾಚರಣೆ ತಂಡ ಡ್ರೋನ್ ಕ್ಯಾಮರ ಸುಳಿವು ಆಧರಿಸಿ, ಭೀಮ ಹಾಗೂ ಮಹೇಂದ್ರ ಆನೆಗಳ ಜೊತೆ ಹುಲಿ ಇದ್ದಲ್ಲಿಗೆ ತೆರಳಿತು.

ಅರವಳಿಕೆ ಬಂದೂಕಿನೊAದಿಗೆ ಭೀಮ ಆನೆಯ ಮೇಲೆ ಶಾರ್ಪ್ ಶೂಟರ್ ರಂಜನ್, ಮಹೇಂದ್ರ ಆನೆಯ ಮೇಲೆ ಅರವಳಿಕೆ ತಜ್ಞ ಡಾ. ರಮೇಶ್ ಕುಳಿತು ಹುಲಿಯನ್ನು ಗಮನಿಸುತ್ತಿದ್ದರು. ಸರಿಯಾದ ಸಂದರ್ಭ ನೋಡಿ ಸುಮಾರು ರಾತ್ರಿ ೧೧ ಗಂಟೆ ಸಮಯದಲ್ಲಿ ಡಾ. ರಮೇಶ್ ಅವರು ಹುಲಿಗೆ ಗುರಿಯಿಟ್ಟು ಅರವಳಿಕೆ ಪ್ರಯೋಗಿಸುವಲ್ಲ್ಲಿ ಯಶಸ್ವಿಯಾದರು. ಅಷ್ಟರವರೆಗೂ ಉಸಿರು ಬಿಗಿಹಿಡಿದು ನಿಂತಿದ್ದ ಕಾರ್ಯಾಚರಣೆ ತಂಡ, ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ನಿಟ್ಟುಸಿರು ಬಿಟ್ಟಿತು.. ಇದರಿಂದ ಆತಂಕದಲ್ಲಿದ್ದ ಗ್ರಾಮಸ್ಥರು ಕೂಡ ನಿರಾಳರಾದರು.

ಭೀಮ ಆನೆಯ ಮಾವುತ ಗುಂಡಣ್ಣ, ಕಾವಾಡಿ ನಂಜುAಡ, ಮಹೇಂದ್ರ ಆನೆಯ ಕಾವಾಡಿಗಳಾದ ರಾಜು ಮತ್ತು ಮಲ್ಲಿಕಾರ್ಜುನ ಸಾರಥಿಗಳಾಗಿ ಕಾರ್ಯ ನಿರ್ವಹಿಸಿದರು. ಇದು ಕೊಡಗಿನಲ್ಲಿ ಡ್ರೋನ್ ಕ್ಯಾಮರ ಬಳಸಿ ಹುಲಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದ ಮೊದಲ ಪ್ರಕರಣ ಇದಾಗಿದ್ದು, ಸೆರೆ ಹಿಡಿದ ಹುಲಿಯನ್ನು ಕೆಲವೇ ನಿಮಿಷಗಳಲ್ಲಿ ಬೆಸಗೂರಿನಿಂದ ತಿತಿಮತಿಗೆ ರವಾನಿಸಿ, ಬೆಳಗಿನ ಜಾವ ಅಲ್ಲಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ. ಕೊಡಗು ಸಿ ಸಿ ಎಫ್ ಸೋನಲ್ ವೃಷ್ಣಿ ಅವರ ನಿರ್ದೇಶನದಲ್ಲಿ, ವೀರಾಜಪೇಟೆ ವಿಭಾಗ ಡಿಎಫ್‌ಓ ಜಗನ್ನಾಥ್ ಅವರ ಮಾರ್ಗದರ್ಶನ, ಎಸಿಎಫ್ ಗೋಪಾಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ವೀರಾಜಪೇಟೆ ಎಸಿಎಫ್ ತಹಸೀನ್ ಬಾನು, ಪೊನ್ನಂಪೇಟೆ ಆರ್‌ಎಫ್‌ಓ ಗಂಗಾಧರ್, ವೀರಾಜಪೇಟೆ ಆರ್‌ಎಫ್‌ಓ ಶಿವರಾಮ್, ಆನೆಚೌಕೂರು ಆರ್‌ಎಫ್‌ಓ ದೇವರಾಜ್, ಕಲ್ಲಳ್ಳ ಆರ್‌ಎಫ್‌ಓ ಅಭಿಷೇಕ್, ಟಿಂಬರ್ ಡಿಪೋ ಆರ್‌ಎಫ್‌ಓ ರಾಜಶೇಖರ್, ಡಿಆರ್‌ಎಫ್‌ಓಗಳಾದ ದಿವಾಕರ್, ಶ್ರೀಧರ್, ನಾಗೇಶ್, ರಕ್ಷಿತ್, ಆರ್‌ಆರ್‌ಟಿ ಸಿಬ್ಬಂದಿ, ಅರಣ್ಯ ಪಾಲಕರು ಪಾಲ್ಗೊಂಡಿದ್ದರು. ಈ ಸಂದರ್ಭ ಎನ್‌ಜಿಓಗಳು, ಎನ್‌ಟಿಸಿಎ ಸದಸ್ಯರು, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು, ರೈತ ಸಂಘದವರು ಇದ್ದರು.