ಮಡಿಕೇರಿ, ಫೆ. ೧೧: ಕೊಡಗಿನ ಗೌರಮ್ಮ ಅವರ ಕತೆಗಳಲ್ಲಿ ಉತ್ತಮ ಸಾರಗಳಿದ್ದು, ಗೌರಮ್ಮ ಅವರು ನಿತ್ಯ ಜೀವಂತವಾಗಿದ್ದಾರೆ ಎಂದು ಗೋಣಿಕೊಪ್ಪ ಕಾವೇರಿ ಕಾಲೇಜು ಕನ್ನಡ ಉಪನ್ಯಾಸಕಿ ಎಸ್.ಎಂ. ರಜನಿ ಅಭಿಪ್ರಾಯಪಟ್ಟರು. ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಮಾಡುವ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಪೂಜಾರೀರ ಕೃಪಾ ದೇವರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಉಪನ್ಯಾಸ ನೀಡಿದರು. ಗೌರಮ್ಮ ಅವರ ಕತೆಗಳಲ್ಲಿ ನಗು, ಸಂತೋಷ, ಅಳು, ಕಂಬನಿ ಎಲ್ಲವೂ ಅಡಗಿದೆ. ಅವರು ನಿತ್ಯ ಜೀವಂತವಾಗಿದ್ದು, ಕತೆಗಳನ್ನು ನಮ್ಮಿಂದ ಬರೆಸುತಿದ್ದಾರೆ ಎಂದು ಹೇಳಿದರು.

ಅಡುಗೆ ಮನೆಯ ವಸ್ತು, ಮಕ್ಕಳ ಆಟವೂ ಕೂಡ ಕತೆಗಳಿಗೆ ವಸ್ತುವಾಗಬಲ್ಲುದು. ಅಂತಹ ಅಂಶಗಳು ಕೃಪಾ ಅವರ ಕತೆಗಳಲ್ಲಿವೆ. ಕತೆಗಳು ಮನಮುಟ್ಟುವಂತಿವೆ. ಕತೆಗಳಲ್ಲಿ ನಗು, ಅಳು, ಸಮಸ್ಯೆ, ಅದಕ್ಕೆ ಪರಿಹಾರ ಸಿಗುವಾಗ ಜೀವನ ಸಾರ್ಥಕ ಅನಿಸುತ್ತದೆ. ಅಲ್ಪ ಸಮಯದಲ್ಲಿ ಓದುವ ಕತೆಗಳಿಂದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಿಗುವ ಪರಿಹಾರದಲ್ಲಿ ಜೀವನದ ಬದಲಾವಣೆ ಕೂಡ ಮಾಡಿಕೊಳ್ಳಬಹುದು ಎಂದರು. ಪ್ರಸ್ತುತ ಓದುವವರ ಸಂಖ್ಯೆ ಕಡಿಮೆಯಾಗಿದ್ದು, ಎಲ್ಲರೂ ಮೊಬೈಲ್ ದಾಸರಾಗಿದ್ದಾರೆ. ಅದಕ್ಕೆ ದಾಸರಾಗದೆ ಮೊಬೈಲ್ ಮೂಲಕ ನಮ್ಮ ಕೆಲಸ ಮಾಡಿಸಿಕೊಂಡು ಸಾಹಿತ್ಯವನ್ನು ಬೆಳೆಸುವ ಕೆಲಸ ಮಾಡೋಣ, ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಬೇಕು. ಯಾವದೇ ಕಾರಣಕ್ಕೂ ಅಂಕಗಳು ಪರಿಗಣನೆಗೆ ಬರುವದಿಲ್ಲ; ಜ್ಞಾನವನ್ನು ಬೆಳೆಸಬೇಕೆಂದು ಹೇಳಿದರು.

ವಿಚಾರಗೋಷ್ಠಿ ಆಗಬೇಕು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಸುಬ್ರಾಯ ಸಂಪಾಜೆ ಅವರು, ಕತೆಗಳಲ್ಲಿ ರೋಚಕತೆ ಇರುತ್ತದೆ ಎಂದು ಡುಂಡಿರಾಜರ ಚುಟುಕುಗಳ ಸಹಿತ ಉದಾಹರಿಸಿದರು. ಗೌರಮ್ಮ ಪ್ರಶಸ್ತಿ ಪಡೆದವರ ಕಥಾಸಂಕಲನಗಳ ಹಾಗೂ ಜಿಲ್ಲೆಯ ಹಿರಿಯ ಸಾಹಿತಿಗಳ ಕೃತಿಗಳನ್ನಾಧರಿಸಿ ಸಾಹಿತ್ಯ ಪರಿಷತ್ತು ವತಿಯಿಂದ ವಿಚಾರಗೋಷ್ಠಿಗಳನ್ನು ಏರ್ಪಡಿಸಬೇಕೆಂದು ಸಲಹೆ ಮಾಡಿದರು. ಸಾಹಿತ್ಯ ಕೇವಲ ಆನಂದ ಕೊಡುವದಲ್ಲ, ಒಲಿತು-ಕೆಡುಕನ್ನೂ ಹೇಳಿಕೊಡುತ್ತದೆ. ಉತ್ತಮ ಧ್ಯೇಯೋದ್ದೇಶ, ಆದರ್ಶವನ್ನಿಟ್ಟುಕೊಂಡು ಸಾಹಿತ್ಯ ಬೆಳೆಯಲಿ, ಕೃತಿಕತೃಗಳಿಂದ ಒಳ್ಳೆಯ ಕೃತಿಗಳು ಮೂಡಿಬರಲಿ ಎಂದು ಆಶಿಸಿದರು.

ಮಕ್ಕಳಿಗೆ ಪುಸ್ತಕ ಕೊಡಿ

ಮುಖ್ಯ ಅತಿಥಿಯಾಗಿದ್ದ ಕೊಡಗು ಚಾನಲ್ ಸಂಪಾದಕ ಹಾಗೂ ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ, ಕ್ರೀಡೆ ಹಾಗೂ ಸೇನೆಗೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಸರುವಾಸಿಯಾಗಿದೆ. ಇತರ ಚಟುವಟಿಕೆಗಳೊಂದಿಗೆ ಪ್ರವೃತ್ತಿಯಾಗಿ ಸಾಹಿತ್ಯ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಪ್ರಸ್ತುತ ಮೊಬೈಲ್ ಜಗತ್ತನ್ನು ಆವರಿಸಿಕೊಂಡಿದೆ. ಪುಸ್ತಕಗಳನ್ನು ಓದಿದಾಗಲೇ ಬರಹಗಾರರಿಗೆ ಸಮಾಧಾನ ಆಗುತ್ತದೆ. ಎಲ್ಲರೂ ಸಾಹಿತ್ಯಾಭಿಮಾನ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ಕೊಡಿ ಎಂದು ಹೇಳಿದರು.

ಬೆಳವಣಿಗೆಗೆ ಪ್ರೇರಣಾ ಶಕ್ತಿ

ಮತ್ತೋರ್ವ ಅತಿಥಿ ಕೊಡಗು ಪತ್ರಿಕಾ ಭವನದ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ, ಶತಮಾನಗಳ ಹಿಂದೆ ಮಹಿಳಾ ಸಂವೇದನೆಯ ಕತೆಗಳನ್ನು ಬರೆಯುವ ಮೂಲಕ ಕೊಡಗಿನ ಗೌರಮ್ಮ ಸಾಹಿತ್ಯ ಪ್ರಪಂಚದಲ್ಲಿ ಮನೆ ಮಾತಾಗಿದ್ದಾರೆ. ಗೌರಮ್ಮ ಪ್ರಸ್ತುತ ಮಹಿಳೆಯರ ಬೆಳವಣಿಗೆಗೆ ಪ್ರೇರಣಾ ಶಕ್ತಿಯಾಗಿದ್ದಾರೆ. ಯುವ ಬರಹಗಾರರನ್ನು ಲೋಕಕ್ಕೆ ನೀಡಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು. ಪತ್ರಕರ್ತರ ಚಟುವಟಿಕೆಗಳಿಗಾಗಿ ನಿರ್ಮಾಣವಾಗಿರುವ ಪತ್ರಿಕಾ ಭವನಕ್ಕೆ ೨೫ ವರ್ಷ ತುಂಬಿದ್ದು, ಬೆಳ್ಳಿ ಮಹೋತ್ಸವ ಸಂಭ್ರಮದಲ್ಲಿದೆ. ಸಾಹಿತ್ಯ ಪರ ಚಟುವಟಿಕೆಗಳಿಗೂ ಭವನದಿಂದ ನೆರವು ನೀಡಲಾಗುತ್ತಿದ್ದು, ಬೆಳ್ಳಿ ಹಬ್ಬದ ಸಂದರ್ಭ ಸಾಹಿತ್ಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಸಂದರ್ಭ-ಸನ್ನಿವೇಶ ಸ್ಫೂರ್ತಿ

ಗೌರಮ್ಮ ದತ್ತಿ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಸಾಹಿತಿ ಕೃಪಾ ದೇವರಾಜ್ ಮಾತನಾಡಿ, ಗೌರಮ್ಮ ಪ್ರಶಸ್ತಿ ಪಡೆಯಬೇಕೆಂಬ ಕನಸು ಇದೀಗ ನನಸಾಗಿದೆ. ಮನೆಯವರು, ಆಪ್ತ ಬಳಗದವರ ಬೆಂಬಲ, ಸಹಕಾರದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಸಮಯ-ಸಂದರ್ಭ-ಸನ್ನಿವೇಶಗಳು ಕತೆಗಳಿಗೆ ಸ್ಫ್ಪೂರ್ತಿಯಾಗುತ್ತವೆ. ಮಕ್ಕಳು ಸಾಹಿತ್ಯವನ್ನು ಓದಬೇಕು ಓದಿದಾಗ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದರು.

ಸಾಹಿತಿಗಳ ಬೆಳವಣಿಗೆ ಉದ್ದೇಶ

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸಾಹಿತಿಗಳ, ಅದರಲ್ಲೂ ಮಹಿಳಾ ಸಾಹಿತಿಗಳ ಬೆಳವಣಿಗೆ ಉದ್ದೇಶದೊಂದಿಗೆ ಅಂದು ಗೌರಮ್ಮ ದತ್ತಿ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಅಂದು ಪ್ರಶಸ್ತಿ ನೀಡಲು ಮಹಿಳಾ ಸಾಹಿತಿಗಳನ್ನು ಹುಡುಕುವ ಪರಿಸ್ಥಿತಿ ಇತ್ತು. ಆದರೆ ಇಂದು ಆಯ್ಕೆ ಮಾಡುವಷ್ಟರ ಮಟ್ಟಿಗೆ ಮಹಿಳಾ ಸಾಹಿತಿಗಳು ಬೆಳೆದಿದ್ದಾರೆ. ಸಾಹಿತಿಗಳನ್ನು ಬೆಳೆಸುವ ಕೆಲಸ ಆಗಬೇಕು, ಮಹಿಳಾ ಶಕ್ತಿ ಉದಯವಾಗಿದೆ ಎಂದು ಹೇಳಿದರು. ಗೌರಮ್ಮ ಪ್ರಶಸ್ತಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವಂತೆ ಸಲಹೆಗಳು ಕೇಳಿ ಬರುತ್ತಿವೆ. ಆದರೆ ಸದ್ಯದ ಮಟ್ಟಿಗೆ ಕೊಡಗು ಜಿಲ್ಲೆಗೆ ಸೀಮಿತವಾಗಿರುವಂತೆ ನೋಡಿಕೊಳ್ಳುವಂತೆ ಕಸಾಪ ಪದಾಧಿಕಾರಿಗಳಿಗೆ ಮನವಿ ಮಾಡಿದರು.

ಜವಾಬ್ದಾರಿ ಹೆಚ್ಚುತ್ತದೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಪ್ರಶಸ್ತಿಗಳು ಗೌರವದೊಂದಿಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಪ್ರಶಸ್ತಿ ಪಡೆದವರು ಏನಾದರೂ ಕಾರ್ಯಕ್ರಮಗಳನ್ನು ಮಾಡುವದರೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕಾರ್ಯ ಮಾಡಬೇಕು ಎಂದು ಹೇಳಿದರು. ಗೌರಮ್ಮ ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು. ದೇಶದ ಸ್ವಾತಂತ್ರö್ಯಕ್ಕಾಗಿ ಸಮರ್ಪಣೆ ಮಾಡಿದವರು. ಸಮಾಜಕ್ಕಾಗಿ ಸಾಹಿತ್ಯದ ಮೂಲಕ ದುಡಿದವರು. ಚಿಕ್ಕ ವಯಸ್ಸಿನಲ್ಲಿ ಅವರಿಗಿದ್ದ ಚಿಂತನೆಗಳು ನಮಗೆ ಇನ್ನೂ ಬಂದಿಲ್ಲವೆAದು ಹೇಳಿದರು. ಕನ್ನಡ ಭಾಷೆ ಬೆಳವಣಿಗೆಗಾಗಿ ಕಸಾಪ ಹಳ್ಳಿಗಳತ್ತ ತೆರಳುತ್ತಿದೆ. ಇದರಿಂದ ಕನ್ನಡ ಉಳಿಯಲು ಸಾಧ್ಯವಾಗುತ್ತದೆ. ಮನೆಯಲ್ಲಿ ನಮ್ಮ ಭಾಷೆ ಮಾತನಾಡಿ ಹೊರಗಡೆ ಕನ್ನಡ ಮಾತಾಡಬೇಕೆಂದು ಕಿವಿಮಾತು ಹೇಳಿದರು.

ಬಹುಮಾನ ವಿತರಣೆ

ಇದೇ ಸಂದರ್ಭದಲ್ಲಿ ಕಸಾಪ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಗೌರಮ್ಮ ಸಣ್ಣ ಕತೆಗಳ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಕತ್ತೂರು ಪ್ರೌಢಶಾಲೆಯ ಕುಬ್ರ ಎ.ಐ. ಪ್ರಥಮ, ಕಡಗದಾಳು ಪ್ರೌಢಶಾಲೆಯ ಬಿ.ಎನ್. ಹರ್ಷಿತ ದ್ವಿತೀಯ ಹಾಗೂ ಪಾನುಪ್ರಿಯ ತೃತೀಯ ಬಹುಮಾನ ಪಡೆದುಕೊಂಡರು.

ಕಸಾಪ ಗೌರವ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಸ್ವಾಗತಿಸಿದರೆ, ಸಾಹಿತಿ ಪ್ರತಿಮಾ ರೈ ನಿರೂಪಿಸಿದರು. ಕಸಾಪ ಗೌರವ ಕೋಶಾಧಿಕಾರಿ ಸಂಪತ್ ಕುಮಾರ್ ವಂದಿಸಿದರು.