ವೀರಾಜಪೇಟೆ, ಫೆ. ೧೧: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾ. ೧೨ ರಂದು ಕಾರ್ಮಿಕ ಸಂಘಟನೆ ಜಂಟಿ ಸಮಿತಿ ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಯಶಸ್ವಿಗಾಗಿ ನಗರದಲ್ಲಿ ಮುಷ್ಕರದ ಕುರಿತಾದ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಜಿಲ್ಲಾ ಸಮಿತಿಯಿಂದ ಹೋರಾಟಕ್ಕೆ ವೀರಾಜಪೇಟೆಯ ಗಡಿಯಾರ ಕಂಬದ ಬಳಿ ಅ ಚಾಲನೆ ನೀಡಲಾಯಿತು.
ಮಡಿಕೇರಿಯ ಹಳೆಯ ಖಾಸಗಿ ಬಸ್ಸು ನಿಲ್ದಾಣದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆಯಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಯವರು ಭಾಗವಹಿಸುವಂತೆ ಮನವಿ ಮಾಡಿ ಮಾತನಾಡಿದ ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡ ಡಾ. ಐ.ಆರ್ ದುರ್ಗಾಪ್ರಸಾದ್, ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ ಸಾಬು ಮಾತನಾಡಿ, ಕಾರ್ಮಿಕರು, ರೈತರು, ಯುವ ಸಮುದಾಯ, ಮಹಿಳಾ ಸಂಘಟನೆಗಳು ಹಾಗೂ ಎಲ್ಲಾ ದುಡಿಯುವ ವರ್ಗದ ಜನ ತಮ್ಮ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಸಿಐಟಿಯು ಪದಾಧಿಕಾರಿಗಳಾದ ಶಾಜಿ ರಮೇಶ್, ಖಾಸಿಂ, ಕೆ.ಕೆ.ಹರಿದಾಸ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಶ್ರೀಧರ್, ಡಿವೈಎಫ್ಐ ಜಿಲ್ಲಾ ಮುಖಂಡ ಸಾದಿಖ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರುಗಳು ಇದ್ದರು.