ಪೊನ್ನಂಪೇಟೆ, ಫೆ. ೧೦: ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ತಾ. ೮ ರಂದು ಮೂರು ಹಸುಗಳನ್ನು ಕೊಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆ ಹಿಡಿಯಲು ಸರ್ಕಾರದಿಂದ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ, ಇಂದು ಸಂಜೆಯಿAದ ಅರಣ್ಯ ಇಲಾಖೆ ಬೆಸಗೂರಿನಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ.

ಕಾರ್ಯಾಚರಣೆಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳಾದ ಭೀಮ ಮತ್ತು ಮಹೇಂದ್ರ ಆನೆಗಳನ್ನು ಬಳಸಿಕೊಳ್ಳಲಾಗಿದ್ದು, ಆನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಶಾರ್ಪ್ ಶೂಟರ್ ರಂಜನ್ ಪಾಲ್ಗೊಂಡಿದ್ದಾರೆ.

ಹುಲಿಯು ಹಸುಗಳನ್ನು ಕೊಂದು ಹಾಕಿರುವ ಸ್ಥಳದ ಸುತ್ತಮುತ್ತ, ಗದ್ದೆ ಹಾಗೂ ಹೊಳೆ ಬದಿಯಲ್ಲಿ ಹುಲಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದ್ದು, ಎರಡು ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಪತ್ತೆ ಕಾರ್ಯ ಮಾಡಲಾಗುತ್ತಿದ್ದು, ಗದ್ದೆಯ ಪೊದೆಯೊಳಗೆ ಹುಲಿಯ ಇರುವಿಕೆ ಬಗ್ಗೆ ಮಾಹಿತಿ ದೊರಕಿದೆ ಎನ್ನಲಾಗಿದೆ.

ಸಿಸಿಎಫ್ ಸೋನಂ ವೃಷ್ಣಿ ನಿರ್ದೇಶನದಂತೆ,ಎಸಿಎಫ್ ಗೋಪಾಲ್ ಅವರ ನೇತೃತ್ವದಲ್ಲಿ, ತಿತಿಮತಿ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಗಂಗಾಧರ್, ಉಪ ವಲಯ ಅರಣ್ಯಾಧಿಕಾರಿಗಳು, ಆರ್ ಆರ್ ಟಿ ಸಿಬ್ಬಂದಿ, ಅರಣ್ಯ ಪಾಲಕರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಹುಲಿ ಸೆರೆಗೆ ಶತ ಪ್ರಯತ್ನ ಪಡುತ್ತಿದ್ದಾರೆ. ಈ ಸಂದರ್ಭ ರೈತ ಸಂಘದ ಮುಖಂಡರು, ಗ್ರಾಮಸ್ಥರು ಇದ್ದರು.

-ಚನ್ನನಾಯಕ