ಪೊನ್ನಂಪೇಟೆ, ಫೆ. ೧೦: ಮೈಸೂರಿನ ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು, ಕಾವೇರಿ ಪದವಿ ಪೂರ್ವ ಕಾಲೇಜು, ಕಾವೇರಿ ಸ್ನಾತಕೋತ್ತರ ಕಾಲೇಜಿನ ೧೩೮ ವಿದ್ಯಾರ್ಥಿಗಳು, ಸರ್ವದೈವತಾ ಪದವಿ ಪೂರ್ವ ಕಾಲೇಜು, ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಒಟ್ಟು ೧೫೬ ಕೊಡವ ಹಾಗೂ ಕೊಡವ ಭಾಷಿಕ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪದವಿ ವಿದ್ಯಾರ್ಥಿಗಳಿಗೆ ತಲಾ ರೂ.೮೦೦೦, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತಲಾ ರೂ.೫೦೦೦, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲಾ ರೂ.೧೦,೦೦೦ ದಂತೆ ಒಟ್ಟು ೧೫೬ ವಿದ್ಯಾರ್ಥಿಗಳಿಗೆ ರೂ.೧೦,೩೬,೦೦೦ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಕಟ್ಟೇರ ಕಾರ್ಯಪ್ಪ ಮಾತನಾಡಿ, ಟ್ರಸ್ಟ್ ವತಿಯಿಂದ ಕೊಡವ ಮತ್ತು ಕೊಡವ ಭಾಷಿಕ ಜನಾಂಗದಲ್ಲಿ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅಪ್ಪ, ಅಮ್ಮ ಇಲ್ಲದ ವಿದ್ಯಾರ್ಥಿಗಳಿಗೆ, ಒಬ್ಬರೇ ಪೋಷಕರು ಇರುವ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತ ಪೋಷಕರ ಮಕ್ಕಳಿಗೆ, ಅಂಗವೈಕಲ್ಯ ಇರುವ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಕೊಡವ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿವರ್ಷ ವಿದ್ಯಾರ್ಥಿವೇತನ ನೀಡುತ್ತಾ ಬರುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಗುರಿ ಇಟ್ಟುಕೊಂಡು, ಸಾಧನೆ ಮಾಡಬೇಕು.ಓದುವ ಸಮಯದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿಯನ್ನು ಮಾಡಿಕೊಳ್ಳಬೇಕು. ಎಂದರು.

ಟ್ರಸ್ಟ್ನ ಗೌರವ ಕಾರ್ಯದರ್ಶಿ ಪಟ್ಟಡ ಜಯಕುಮಾರ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕೊಡವ ಹಾಗೂ ಕೊಡವ ಭಾಷಿಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಧನ ಸಹಾಯ ಮಾಡಲಾಗುತ್ತಿದೆ. ಈ ಹಣವನ್ನು ತಮ್ಮ ಓದಿಗೆ ಪೂರಕವಾಗಿ ಉಪಯೋಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಮೊಬೈಲ್‌ನಲ್ಲಿ ಅನಾವಶ್ಯಕವಾಗಿ ಕಾಲಹರಣ ಮಾಡದೇ, ವಿದ್ಯಾರ್ಜನೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಸಂಪಾದಿಸಿಕೊಳ್ಳಬೇಕು. ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಮಾಳೇಟಿರ ಬಿ. ಕಾವೇರಿಯಪ್ಪ ಮಾತನಾಡಿ ಕೊಡವ ದೀನ ಬಂಧು ಚಾರಿ ಟೇಬಲ್ ಟ್ರಸ್ಟ್ ನಿಂದ ನೀಡುವ ವಿದ್ಯಾರ್ಥಿ ವೇತನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲಿದೆ. ಈ ಟ್ರಸ್ಟ್ನಿಂದ ಸಹಾಯ ಪಡೆದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ತಾವು ಉದ್ಯೋಗಕ್ಕೆ ಸೇರಿದ ನಂತರ ಟ್ರಸ್ಟ್ಗೆ ಧನ ಸಹಾಯ ಮಾಡಿದರೆ, ಮತ್ತಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಸಾಧ್ಯವಾಗುತ್ತದೆ. ಟ್ರಸ್ಟ್ನಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಕರೆಮಾಡಿ, ಅಥವಾ ಪತ್ರದ ಮೂಲಕ ಟ್ರಸ್ಟ್ಗೆ ಧನ್ಯವಾದಗಳನ್ನು ತಿಳಿಸುವ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು. ಇದರಿಂದ ಟ್ರಸ್ಟ್ ಅನ್ನು ಮುನ್ನಡೆಸುವ ಹಿರಿಯ ಜೀವಗಳಿಗೆ ಖುಷಿಯಾಗುತ್ತದೆ ಎಂದರು.

ಟ್ರಸ್ಟ್ನ ಖಜಾಂಚಿ ನಿವೃತ್ತ ವಿಂಗ್ ಕಮಾಂಡರ್ ಚೇಂದ್ರಿಮಾಡ ಜಿ.ಮಾದಪ್ಪ, ಟ್ರಸ್ಟಿಗಳಾದ ಚಂಬಾAಡ ಸೋಮಣ್ಣ, ಕಳ್ಳಿಚಂಡ ಮುದ್ದುರಾಜು, ಕಾವೇರಿ ಕಾಲೇಜು ಆಡಳಿತಾತ್ಮಕ ಸಿಬ್ಬಂದಿ ಲತಾ, ಯಮುನ, ಪೋಷಕರು ಹಾಜರಿದ್ದರು. ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಎಸ್.ಮಾದಯ್ಯ ಸ್ವಾಗತಿಸಿ, ಉಪನ್ಯಾಸಕಿ ಕುಸುಮ್ ನಿರೂಪಿಸಿ, ವಂದಿಸಿದರು. ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್ ನ ವಿದ್ಯಾರ್ಥಿವೇತನ ಹಾಗೂ ಇನ್ನಿತರ ಮಾಹಿತಿಗಾಗಿ ಪಟ್ಟಡ ಜಯಕುಮಾರ್ ಮೊ.ಸಂ. ೯೪೮೦೬೬೫೫೨೫ ಕ್ಕೆ ಸಂಪರ್ಕಿಸಬಹುದು.