ಸೋಮವಾರಪೇಟೆ, ಫೆ. ೧೦: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಐಗೂರಿನಲ್ಲಿ ತಾ. ೯ ರಂದು ನಡೆದ ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹತ್ತುಹಲವು ವೈವಿಧ್ಯಮಯ ಕಾರ್ಯಕ್ರಮಗಳು ನುಡಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದವು. ಸಮ್ಮೇಳನದ ಅಂಗವಾಗಿ ಐಗೂರು ಗ್ರಾಮದಲ್ಲಿ ಕನ್ನಡ ಕಲರವದ ಸನ್ನಿವೇಶ ಸೃಷ್ಟಿಯಾಗಿತ್ತು. ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಿದರೆ, ವಿಚಾರಗೋಷ್ಠಿಯಲ್ಲಿ ಪ್ರಸಕ್ತ ವಿದ್ಯಮಾನಗಳೊಂದಿಗೆ ಕಾಡುತ್ತಿರುವ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿತು. ಗೀತ ಗಾಯನ ಜನಮನಸೂರೆಗೊಳ್ಳುವಂತೆ ಮಾಡಿತು. ಕನ್ನಡ ಹಾಡುಗಳಿಗೆ ಗಾಯಕರು ಧ್ವನಿಯಾದರು. ಇದೇ ಸಂದರ್ಭ ೬ ಕೃತಿಗಳು ಲೋಕಾರ್ಪಣೆಗೊಂಡವು. ಸಂಜೆ ಸಮಾರೋಪಗೊಳ್ಳುವ ಮೂಲಕ ನುಡಿಹಬ್ಬಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಈ ಸಂದರ್ಭ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಒಟ್ಟಾರೆಯಾಗಿ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಐಗೂರು ಸಿರಿಯ ನಡುವೆ ವೈಭವಯುತವಾಗಿ ನಡೆದು ಸ್ಮರಣೀಯಗೊಳಿಸಿತು. ಚಿತ್ರ, ವರದಿ : ವಿಜಯ್ ಹಾನಗಲ್/ಸುಕುಮಾರ್

ಸೋಮವಾರಪೇಟೆ: ಐಗೂರಿನ ಕಾಜೂರು ಸರ್ಕಾರಿ ಶಾಲೆಯಲ್ಲಿ ಕಸಾಪ ಘಟಕಗಳಿಂದ ಆಯೋಜನೆಗೊಂಡಿದ್ದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಡಿಬಂದ ಕನ್ನಡ ಗೀತಗಾಯನ ಕಾರ್ಯಕ್ರಮ ಕೇಳುಗರ ಮನಸೂರೆಗೊಳಿಸಿತು.

ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ಅವರು ‘ಕನ್ನಡ ಗಂಗೆಯಲಿ ಮೀಯುವೆ ನಾನೀಗ..’ ಎಂಬ ಹಾಡನ್ನು ಶುಶ್ರಾವ್ಯವಾಗಿ ಹಾಡುವ ಮೂಲಕ ಚಾಲನೆ ನೀಡಿದರು. ನಂತರ ತಾಲೂಕಿನ ಉದಯೋನ್ಮುಖ ಗಾಯಕರಾದ ಜನಾರ್ದನ್ ಅವರು ‘ಕನ್ನಡ ನಾಡಿನ ಜೀವನದಿ.. ಈ ಕಾವೇರಿ- ಕಣಕಣದೆ ಶಾರದೆ-ಕಲೆತಿಹಳು ಕಾಣದೇ..’ ಹಾಡುವ ಮೂಲಕ ರಂಜಿಸಿದರು. ಟಿ.ಜೆ. ಪ್ರವೀಣ್ ಕುಮಾರ್ ಅವರು-ತರವಲ್ಲ ತಗೀನಿನ್ನ ತಂಬೂರಿ ಸ್ವರ.., ಉಮೇಶ್ ಅವರು -ಎಲ್ಲಾದರೂ ಇರು..,ಎಂತಾದರೂ ಇರು ಎಂದೆAದಿಗೂ ನೀ ಕನ್ನಡವಾಗಿರು ಗೀತೆಯನ್ನು, ಸುಮತಿ ಅವರು-ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು ನಾ ಹಾಡುವೆ ಕೇಳಿ.., ಪೀಟರ್ ಅವರು-ಅರ್ಪಣೆ...ನಿನಗೇ ಅರ್ಪಣೆ, ಶನಿವಾರಸಂತೆಯ ರಾಮು ಅವರು-ಓ ಭಾರತ ರತ್ನ ಅಂಬೇಡ್ಕರ..ನಿನಗೆ ವಂದನೆ ಎಂಬ ಹಾಡುಗಳನ್ನು ಹಾಡುವ ಮೂಲಕ ಕೇಳುಗರನ್ನು ಮನಸೂರೆಗೊಳಿಸಿದರು.

ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶರ್ಮಿಳಾ ರಮೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ನಿರ್ದೇಶಕ ಸುರೇಂದ್ರ, ಪತ್ರಕರ್ತರಾದ ಡಿ.ಪಿ. ಲೋಕೇಶ್, ಸುಕುಮಾರ್, ಬಿಟಿಸಿಜಿ ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ಡಿ. ಹರ್ಷ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಸೇರಿದಂತೆ ಇತರರು ಇದ್ದರು.ಸೋಮವಾರಪೇಟೆ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕೊಡಗಿನ ಗೌರಮ್ಮ ವೇದಿಕೆಯಲ್ಲಿ ಮೂಡಿಬಂದ ವಿಚಾರಗೋಷ್ಠಿಯು ಸೋಮವಾರಪೇಟೆ ತಾಲೂಕಿನಲ್ಲಿ ನಡೆಯುವ ಪ್ರಮುಖ ಜಾನಪದ ಸುಗ್ಗಿ ಹಬ್ಬಗಳು, ಪ್ರವಾಸೋದ್ಯಮದ ಬೆಳವಣಿಗೆ, ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳತ್ತ ಬೆಳಕು ಚೆಲ್ಲಲು ಅವಕಾಶ ಒದಗಿಸಿತು.

ವಿಚಾರಗೋಷ್ಠಿಯಲ್ಲಿ ‘ಗ್ರಾಮೀಣ ಜನರ ಜಾನಪದ ಹಿನ್ನೆಲೆಯ ಸುಗ್ಗಿ ಹಬ್ಬಗಳು’ ವಿಷಯದ ಬಗ್ಗೆ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಹರ್ಷ ಅವರು ವಿಚಾರ ಮಂಡಿಸಿ, ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕೃತಿಯ ಪ್ರತೀಕವಾಗಿ ಸುಗ್ಗಿ ಹಬ್ಬಗಳು ನಡೆಯುತ್ತವೆ. ಗ್ರಾಮ ದೇವತೆಯ ಉತ್ಸವವಾಗಿ ಸುಗ್ಗಿ ಹೆಸರು ಪಡೆದಿದೆ. ಹಬ್ಬಗಳು ಏಕತೆಯ ಸಂಕೇತವಾಗಿದೆ ಎಂದರು.

ನೆಲದ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬಗಳು ಇಂದಿಗೂ ಉಳಿದುಕೊಂಡು ಬಂದಿದೆ. ಸುಗ್ಗಿ ಹಬ್ಬಗಳು ಗ್ರಾಮೀಣ ಬದುಕಿನ ಜೀವನಾಡಿಯಾಗಿವೆ. ಜಾನಪದ ಬೆಡಗನ್ನು ತೆರೆದಿರುವ ಉತ್ಸವವಾಗಿ ಹೆಸರು ಪಡೆದಿರುವ ಸುಗ್ಗಿಯು, ಸ್ನೇಹ ಸಂಬAಧ ವೃದ್ಧಿಯೊಂದಿಗೆ ಸಂಭ್ರಮಕ್ಕೆ ಅವಕಾಶ ಕಲ್ಪಿಸುತ್ತವೆ ಎಂದರಲ್ಲದೇ, ಆಚರಣೆಯ ಉದ್ದೇಶ, ಸುಗ್ಗಿಯ ಇತಿಹಾಸ, ಆಚರಣೆಗಳ ಬಗ್ಗೆ ಮಾಹಿತಿ ಒದಗಿಸಿದರು.

ಸೋಮವಾರಪೇಟೆ ತಾಲೂಕಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ವಿಷಯದ ಬಗ್ಗೆ ಮಾತನಾಡಿದ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಪ್ರವಾಸಿ ತಾಣಗಳಿದ್ದರೂ ಪ್ರಚಾರ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಸಾಧ್ಯವಾಗಿಲ್ಲ ಎಂದರು.

ದೊಡ್ಡಮಳ್ತೆಯಲ್ಲಿ ಶಿಲಾಯುಗ ಮಾನವನ ಕುರುಹುಗಳನ್ನು ಕಾಣಬಹುದು. ಉತ್ತರ ಕನ್ನಡದ ಬನವಾಸಿಯ ಹಾನಗಲ್‌ನ ಕದಂಬರ ಶಾಖೆ ಸೋಮವಾರಪೇಟೆಯಲ್ಲೂ ಇತ್ತು ಎಂಬುದಕ್ಕೆ ಹಾನಗಲ್ಲು ಗ್ರಾಮ ಸಾಕ್ಷಿಯಾಗಿದೆ. ಜೈನರ ವಾಸದ ಕುರುಹುಗಳು ಇಂದಿಗೂ ಜೀವಂತವಿದೆ. ವೀರಗಲ್ಲುಗಳು ಇತಿಹಾಸ ಸಾರುತ್ತವೆ. ಸ್ವಾತಂತ್ರö್ಯವೀರರು ವೀರಮರಣ ಅಪ್ಪಿದ ಕುರುಹುಗಳಿವೆ ಎಂದು ತಿಳಿಸಿದರು.

ಮಲ್ಲಳ್ಳಿ ಜಲಪಾತ ಇತರ ಜಲಪಾತಗಳಿಗಿಂತಲೂ ಹೆಚ್ಚಿನ ಸೌಂದರ್ಯ, ಸೊಬಗು ಹೊಂದಿದೆ. ಶನಿವಾರಸಂತೆಯಲ್ಲಿ ಮಠಗಳು ಅಧ್ಯಾತ್ಮಿಕ ತಾಣಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮುಳ್ಳೂರು, ಕಲ್ಕಂದೂರು ಜೈನ ಬಸದಿಗಳು ಇತಿಹಾಸದ ಅಧ್ಯಯನಕ್ಕೆ ಸೂಕ್ತವಾಗಿದೆ. ಇರುವ ಸ್ಥಳಗಳನ್ನು ಬಳಸಿಕೊಂಡು ಆಧ್ಯಾತ್ಮಿಕ ತಾಣ, ಕೃಷಿ ಪ್ರವಾಸೋದ್ಯಮವನ್ನಾಗಿ ಮಾಡಬೇಕು ಎಂದು ಮಿಲನಾ ಭರತ್ ಹೇಳಿದರು.

ಕ್ರೀಡಾ ಮೀನುಗಾರಿಕೆಯತ್ತಲೂ ಗಮನ ಹರಿಸಬಹುದು ಎಂದ ಅವರು, ಚಾರಣಯೋಗ್ಯ ಬೆಟ್ಟ, ಜಲಪಾತಗಳು, ನೀರಿನ ಜಲಕ್ರೀಡೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನಿಸಿದ ಶನಿವಾರಸಂತೆಯ ಮನೆಯನ್ನು ಪ್ರವಾಸಿತಾಣವನ್ನಾಗಿ ಮಾಡಬೇಕು. ಸಂಸ್ಕೃತಿ ರಕ್ಷಣೆ, ಉದ್ಯೋಗ ಸೃಷ್ಟಿ, ಸುಸ್ಥಿರ ಪರಿಸರ ಸಂರಕ್ಷಣೆಯ ಪ್ರವಾಸೋದ್ಯಮ ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ರೈತಾಪಿ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳು ವಿಷಯದ ಬಗ್ಗೆ ವಿಷಯ ಮಂಡಸಿದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್ ಅವರು, ಅರಣ್ಯ ಇಲಾಖಾ ಅಧಿಕಾರಿಗಳ ಹೆಲಿಕಾಪ್ಟರ್ ಸರ್ವೆಯಿಂದ ಕೃಷಿ ಭೂಮಿ ಡೀಮ್ಡ್ ಫಾರೆಸ್ಟ್ ಆಗಿದೆ. ಕಸ್ತೂರಿ ರಂಗನ್ ವರದಿಯಿಂದ ರೈತರು ಒಕ್ಕಲೆಬ್ಬುವ ಭಯ ಉಂಟಾಗಿತ್ತು. ರೈತರು ಭೂಮಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕೊಂಚಮಟ್ಟಿಗೆ ಆತಂಕ ತಗ್ಗಿದೆ ಎಂದರು. ಸುಂದರ ಕೊಡಗಿನ ಫಲವತ್ತಾದ ಭೂಮಿಯಲ್ಲಿ ಬೆಳೆಯುತ್ತಿರುವ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಳಿಂದ ಸರ್ಕಾರಕ್ಕೆ ೧೨ ಸಾವಿರ ಕೋಟಿ ರಾಜಧನ ಪಾವರಿಯಾಗುತ್ತಿದೆ. ಆದರೆ ರೈತರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ೨ ತಿಂಗಳಿಗೆ ವಿದ್ಯುತ್ ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ. ತಂಬಾಕು ಬೆಳೆಗೆ ಉಚಿತ ವಿದ್ಯುತ್ ನೀಡುವ ಸರ್ಕಾರ; ಕೊಡಗಿನ ಕಾಫಿ ಕೃಷಿಗೆ ವಿದ್ಯುತ್ ನೀಡುತ್ತಿಲ್ಲ. ೧೦ ಹೆಚ್.ಪಿ. ಉಚಿತ ವಿದ್ಯುತ್‌ಗೆ ಹಳೆಯ ಬಾಕಿ ಶುಲ್ಕ ಪಾವತಿಸುವಂತೆ ಸರ್ಕಾರ ಹೇಳಿತ್ತು. ಅದರಂತೆ ಕೆಲವು ರೈತರು ಹಣ ಪಾವತಿ ಮಾಡಿದ್ದರೂ ಡಿಬಿಟಿ ಮೂಲಕ ಬಿಡಿಗಾಸು ಸಹಾಯಧನ ಬಂದಿಲ್ಲ ಎಂದು ಆರೋಪಿಸಿದರು.

ವನ್ಯಪ್ರಾಣಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ವನ್ಯಪ್ರಾಣಿ ದಾಳಿಗೆ ಒಳಗಾದ ಕುಟುಂಬಕ್ಕೆ ಪರಿಹಾರದೊಂದಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಬೇಕು. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಬೇಕು. ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಸಾಂತ್ವಾನ ಸಮಿತಿಯ ಉಪಾಧ್ಯಕ್ಷ ಶಾಫಿ ಸಅದಿ ವಹಿಸಿ ಮಾತನಾಡಿ, ಸೋಮವಾರಪೇಟೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರ ಗಮನ ಹರಿಸಬೇಕು. ವಲಸಿಗ ಕಾರ್ಮಿಕರ ಬಗ್ಗೆ ಪೊಲೀಸ್ ಇಲಾಖೆ ಪರಿಹಾರ ನೀಡಬೇಕು. ನೆಲಸ ಸಂಸ್ಕೃತಿ ಉಳಿಸಬೇಕು ಎಂದರು. ಶಿಕ್ಷಕಿಯರುಗಳಾದ ರಂಜಿನಿ, ವಾಸಂತಿ ರವೀಂದ್ರ, ಜ್ಯೋತಿ ಅರುಣ್ ಕಾರ್ಯಕ್ರಮ ನಿರ್ವಹಿಸಿದರು.ಸೋಮವಾರಪೇಟೆ: ಐಗೂರಿನಲ್ಲಿ ನಡೆದ ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ೬ ಮಂದಿ ಲೇಖಕರು ರಚಿಸಿರುವ ೬ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದ ಜಲಜಾ ಶೇಖರ್ ಅವರು ರಚಿಸಿರುವ ನಿರುತ್ತರ ಕೃತಿಯನ್ನು ಶಾಸಕ ಡಾ. ಮಂತರ್ ಗೌಡ ಬಿಡುಗಡೆ ಮಾಡಿದರು. ಬೆಸೂರು ಮೋಹನ್ ಪಾಳೇಗಾರ್ ಅವರ ೪೦೧ನೇ ಕೃತಿಯಾಗಿರುವ ಕಾಂಪೌAಡಿಗೆ ಬಣ್ಣ-ಮನೆಗೆ ಸುಣ್ಣವಿಲ್ಲ ಕೃತಿಯನ್ನು ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಜಲಾ ಕಾಳಪ್ಪ ಅವರ ನೆಮ್ಮದಿ ಕೃತಿಯನ್ನು ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ಶರ್ಮಿಳಾ ರಮೇಶ್ ಅವರ ೯ನೇ ಕೃತಿ ಭವ ಭಾವದೆಡೆಗೆ ವಿಕಾಸ ದರ್ಶನ ಕೃತಿಯನ್ನು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಲಾವಣ್ಯ ಮೋಹನ್ ಅವರ ಪುಷ್ಕರಣಿ ಕೃತಿಯನ್ನು ಕಸಾಪ ಮಾಜೀ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಯಶಸ್ವಿ ಗಣೇಶ್ ಅವರ ಸಪ್ತಸಾಗರ ತಾಣ ಕೃತಿಯನ್ನು ಕಡ್ಲೇರ ತುಳಸಿ ಮೋಹನ್ ಅವರುಗಳು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಕೃತಿಗಳ ಲೇಖಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸೋಮವಾರಪೇಟೆ: ಐಗೂರಿನ ಕಾಜೂರು ಸರ್ಕಾರಿ ಶಾಲಾ ಮೈದಾನದ ಕೊಡಗಿನ ಗೌರಮ್ಮ ವೇದಿಕೆಯಲ್ಲಿ ಮೂಡಿಬಂದ ೯ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ೯ ಮಂದಿ ಕವಿಗಳು ತಮ್ಮ ಕವನವನ್ನು ವಾಚಿಸಿದರು. ಕವಿ ಭಾವದ ಅಕ್ಷರಗಳ ಸಾಲಿಗೆ ಸಾಹಿತ್ಯಾಸಕ್ತರು ಕಿವಿಯಾದರು.

ಸಾಲದ ಶೂಲ ಕವನದಲ್ಲಿ ಕವಿ ಕಿರಗಂದೂರು ಗ್ರಾಮದ ಮಹೇಶ್ ತಿಮ್ಮಯ್ಯ ಅವರು, ವಿಲಾಸಿ ಜೀವನದಿಂದ ಆಗುವ ಸಾಲ, ಜೀವನ ನಷ್ಟದ ಬಗ್ಗೆ ತಿಳಿಸಿದರು. ಮಳೆಯಧಾರೆ ಕವನದಲ್ಲಿ ದೀಪಿಕಾ ಸುದರ್ಶನ್ ಅವರು, ಮಳೆಗೆ ಹಸಿರಾಗುವ ಇಳೆಯ ಬಗ್ಗೆ ವರ್ಣಿಸುತ್ತಲೇ, ಭೂಗರ್ಭ ಬಗೆಯಲು ಹೊರಟಿರುವ ಮನುಕುಲದ ಬಗ್ಗೆ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಿದರು. ಲತಾ ಕೃಷ್ಣ ಅವರು ತಮ್ಮ ಬದುಕೆಂಬ ಹೊತ್ತಿಗೆ ಕವನದಲ್ಲಿ ಮಾನಸಿಕ ತುಮುಲಗಳಿಗೆ ಅಕ್ಷರದ ರೂಪ ನೀಡಿದರು. ಸಾಹಿತ್ಯದ ಅಮೃತ ಸಿಂಚನ ಕವನದಲ್ಲಿ ಪದ್ಮಾವತಿ ಅವರು, ಸಾಹಿತ್ಯವೆಂದರೆ ಅಕ್ಷರಗಳ ಸಾಲು ಅಲ್ಲ; ಮಾನವತೆಯ ಮೌನ ಪ್ರಾರ್ಥನೆ ಎಂದರು. ಸುಮನ ಗೌತಮ್ ಅವರು ನಾವೆಷ್ಟು ಸಂತೋಷವಾಗಿದ್ದೇವೆ? ನಮ್ಮ ಮಕ್ಕಳೆಷ್ಟು ಸಂತೋಷವಾಗಿದ್ದಾರೆ? ಎಂಬ ಕವನದಲ್ಲಿ ಪೋಷಕರ ಆಲಸ್ಯದಿಂದಾಗಿ ದಾರಿ ತಪ್ಪುತ್ತಿರುವ ಮಕ್ಕಳ ಬಗ್ಗೆ ಹೇಳುತ್ತಲೇ, ಜವಾಬ್ದಾರಿ ಮರೆತ ಪೋಷಕರನ್ನು ಅಕ್ಷರದ ಮೂಲಕ ತರಾಟೆಗೆತ್ತಿಕೊಂಡರು. ಕೊನೆಯಲ್ಲಿ ಮಕ್ಕಳ ಹಕ್ಕುಗಳು ಕಳಚುತ್ತಿರುವ ಬಗ್ಗೆ ಕಾಳಜಿ ತೋರಿದರು. ಸೌಂದರ್ಯ ಮಾಸುವುದು ಕವನದಲ್ಲಿ ಹೇಮಂತ್ ಪಾರೇರ ಅವರು ಜೀವನದ ಮಜಲುಗಳನ್ನು ಬಿಚ್ಚಿಟ್ಟರು. ಆವರಿಸಿತು ಮೌನ ಎಂಬ ಕವನದ ಮೂಲಕ ವಾಸಂತಿ ರವೀಂದ್ರ ಅವರು ಮನುಕುಲದ ಬದುಕಿನ ಚಿತ್ರಣ ತೆರೆದಿಟ್ಟರು. ಶನಿವಾರಸಂತೆಯ ನಾಗರಾಜ್ ಆಚಾರ್ ಅವರು ತಮ್ಮ ಆನೆ ಸಾಕ ಬೇಕಾಗಿದೆ ಕವನದಲ್ಲಿ, ಆರೋಗ್ಯ, ನೆಮ್ಮದಿ, ಸಮಯ, ಎಂಬ ಆನೆಯನ್ನು ನಾವು ಉತ್ತಮವಾಗಿ ನೋಡಿಕೊಳ್ಳಬೇಕಿದೆ ಎಂದರು.

ಅನುಸೂಯ ಅವರು ನಮ್ಮೂರ ಕನ್ನಡ ಸಿರಿ ಕವನದಲ್ಲಿ ಹೆಸರಾಯಿತು ಕಾಜೂರು-ಉಸಿರಾಯಿತು ಐಗೂರು. ಹಚ್ಚ ಹಸಿರಿನ ಸಿರಿ, ನೀ ನೋಡು ಕಾಜೂರು-ಐಗೂರಿನ ಐಸಿರಿ ಎಂದು ಕರೆಕೊಟ್ಟರು. ಬಿ.ಎ. ಗಣೇಶ್ ಅವರು ಹಾಡುಬಾರೇ ಕೋಗಿಲೆ ಎಂಬ ಭಾವಗೀತೆಯನ್ನು ಪ್ರಸ್ತುತ ಪಡಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕ, ಯುವ ಸಾಹಿತಿ ಸತೀಶ್ ಕಾಜೂರು ಮಾತನಾಡಿ, ಅನುಭವಗಳು ಹದಗೊಂಡು ಅನನ್ಯವಾಗಿ ಹೊರಬಂದರೆ ಮಾತ್ರ ಕವಿತೆಯಾಗುತ್ತದೆ. ಕವಿತೆ ರಚನೆಗೆ ವಿಶೇಷ ಆಲೋಚನೆ, ಅಧ್ಯಯನ ಮುಖ್ಯ. ಎ.ಐ. ಯುಗದಲ್ಲಿ ಮೆದುಳನ್ನು ಮತ್ತೊಂದಕ್ಕೆ ಅಡವಿಟ್ಟು ಸಹಾಯ ಬಯಸುವ ಸ್ಥಿತಿಯಲ್ಲಿ ನಾವಿದ್ದೇವೆ. ಯಾವುದನ್ನು ನಾವು ಬಳಸುವುದಿಲ್ಲವೋ ಅದು ನಾಶವಾಗುತ್ತದೆ ಎಂಬ ನಿಯಮದಂತೆ ಮುಂದೆ ನಮ್ಮ ಮನಸ್ಸು, ಮೆದುಳು ನಿಷ್ಕಿçಯಗೊಳ್ಳುವ ಆತಂಕ ಎದುರಾಗಿದೆ ಎಂದರು. ಕವಿತೆ ಹೃದಯವನ್ನು ಅರಳಿಸುತ್ತದೆ. ಲೋಕದ ಕೆಟ್ಟ ನಡೆಯನ್ನು ಪ್ರಶ್ನಿಸುತ್ತದೆ. ಜೀವನದ ಚೈತನ್ಯ ಹೆಚ್ಚಿಸುತ್ತದೆ. ಹೀಗಾಗಿ ಕವಿತೆ, ಸಾಹಿತ್ಯದೆಡೆಗೆ ಎಲ್ಲರೂ ಮನಸ್ಸು ಮಾಡಬೇಕು ಎಂದರು. ವೇದಿಕೆಯಲ್ಲಿ ಇಂಜಿನಿಯರ್ ಎ.ಆರ್. ಮಮತ, ಹಿರಿಯ ಸಾಹಿತಿ ನ.ಲ. ವಿಜಯ ಇದ್ದರು. ಶಿಕ್ಷಕ ಮಂಜುನಾಥ್, ನಿಶ್ಚಯ್ ಕಾರ್ಯಕ್ರಮ ನಿರ್ವಹಿಸಿದರು. ಸೋಮವಾರಪೇಟೆ: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ, ಐಗೂರು ಘಟಕದ ಆಶ್ರಯದಲ್ಲಿ ಸ್ಥಳೀಯ ಕಾಜೂರು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆದ ೯ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂಜೆ ವಿಧ್ಯುಕ್ತವಾಗಿ ತೆರೆ ಕಂಡಿತು.

ಕೊಡಗಿನ ಗೌರಮ್ಮ ಪ್ರಧಾನ ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮದೊAದಿಗೆ ಮುಕ್ತಾಯಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಸಮ್ಮೇಳನದ ಸರ್ವಾಧ್ಯಕ್ಷೆ ಜಲಜಾ ಶೇಖರ್ ಅವರು, ಕನ್ನಡ ನಾಡು, ನುಡಿ, ಗಡಿ, ಸಾಹಿತ್ಯದ ಬೆಳವಣಿಗೆಗೆ ಸರ್ವರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಐಗೂರಿನ ಜನತೆಯ ಸಹಕಾರದಿಂದ ೯ನೇ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಕನ್ನಡದ ಸೇವೆಯನ್ನು ಕನ್ನಡಿಗರೆಲ್ಲರೂ ಮಾಡಬೇಕು. ಹಾಗಾದಾಗ ಮಾತ್ರ ಕನ್ನಡತನ ಉಳಿಯುತ್ತದೆ. ಭಾಷೆಯೊಂದಿಗೆ ಸಾಹಿತ್ಯವೂ ಬೆಳೆಯುತ್ತದೆ ಎಂದು ಅಭಿಪ್ರಾಯಿಸಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸೋಮವಾರಪೇಟೆ ವಿರಕ್ತ ಮಠಾಧೀಶರಾದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡದ ಕಾರ್ಯದಲ್ಲಿ ಸದಾ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು. ಸಂಸ್ಕೃತ ಭಾಷೆಗೆ ಕನ್ನಡವೂ ಲಿಪಿ ನೀಡಿದೆ. ಉಳಿದಂತೆ ಇತರ ಭಾಷೆಗಳಿಗೂ ವ್ಯಾಕರಣ ಒದಗಿಸಿದೆ. ಬದುಕಿಗೆ ಸಾವಿರ ಭಾಷೆಗಳಿದ್ದರೂ ಮಾತೃಭಾಷೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು. ನಮ್ಮತನವನ್ನು ನಾವೇ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾದಾಪುರ ನಿರ್ಮಲ ಮಾತೆ ದೇವಾಲಯದ ಧರ್ಮಗುರು ಸ್ವಾಮಿ ಸೂಸೈ ಮಾತನಾಡಿ, ಅನ್ಯ ಭಾಷೆಗಳನ್ನು ಕಲಿಯುವುದು ತಪ್ಪಲ್ಲ; ಆದರೆ ನಮ್ಮ ಮಾತೃ ಭಾಷೆಗೆ ನಾವೇನು ಕೊಡುಗೆ ನೀಡಿದ್ದೇವೆ ಎನ್ನುವುದು ಮುಖ್ಯ. ಕದಂಬರಿAದ ಮೈಸೂರು ಅರಸರವರೆಗೂ ಕನ್ನಡ ಭಾಷೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದ ಅವರು, ಮಕ್ಕಳಿಗೆ ಕನ್ನಡ ಮೇಲೆ ಪ್ರೀತಿ ಮೂಡಿಸಬೇಕು ಎಂದು ತಿಳಿಸಿದರು.

ಎಸ್‌ವೈಎಸ್ ಸಾಂತ್ವಾನ ವಿಭಾಗದ ಉಪಾಧ್ಯಕ್ಷ ಶಾಫಿ ಸದಿ ಮಾತನಾಡಿ, ಕನ್ನಡ ಎಂಬುದು ಎಲ್ಲಾ ಜಾತಿ, ಧರ್ಮಗಳಿಗೂ ಸೇರಿದ್ದು. ಸರ್ವ ಧರ್ಮದವರೂ ಕೂಡ ಕನ್ನಡಿಗರಾಗಿ ಬದುಕುವ ನೆಲೆಯನ್ನು ಕರ್ನಾಟಕ ನೀಡಿದೆ. ಭಾಷೆಯ ಜಾಗೃತಿಗಾಗಿ ಕಸಾಪ ನಿರಂತರ ಜಾಗೃತಿ ಮೂಡಿಸುತ್ತಿದೆ ಎಂದು ಶ್ಲಾಘಿಸಿದರಲ್ಲದೇ, ಕನ್ನಡ ಸಾಹಿತ್ಯ, ಸಂಸ್ಕೃತಿ ಉಳಿಯಬೇಕು ಎಂದು ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿದ್ದರು.

ಸಮಾರಂಭದಲ್ಲಿ ದತ್ತಿನಿಧಿ ದಾನಿಗಳು, ಸಮಾಜ ಸೇವೆ, ಶಿಕ್ಷಣ ಕ್ಷೇತ್ರ, ವೈದ್ಯಕೀಯ, ಸಹಕಾರ, ಕೃಷಿ, ರಕ್ಷಣಾ ಕ್ಷೇತ್ರ, ಕ್ರೀಡೆ, ಪತ್ರಿಕಾ ಕ್ಷೇತ್ರ, ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಕೆ.ಎನ್. ದೀಪಕ್, ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಪ.ಪಂ. ಮಾಜೀ ಸದಸ್ಯೆ ಶೀಲಾ ಡಿಸೋಜ, ಕೆಟಿಡಿಓ ಅಧ್ಯಕ್ಷ ವಸಂತ್ ಆಚಾರ್ಯ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಎಸ್.ಎಂ. ಚಂಗಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವ ಕುಂಬೂರು ಸೇರಿದಂತೆ ವಿವಿಧ ಉಪ ಸಮಿತಿಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಮೆರವಣಿಗೆಯಲ್ಲಿ ಜಾನಪದ ಸಂಸ್ಕೃತಿಯ ಪ್ರತೀಕ ವಾದ ರೈತರ ಎತ್ತಿನ ಗಾಡಿಗಳು ಗಮನ ಸೆಳೆದವು. ಕೂಡಿಗೆ ಸಮೀಪದ ಕೂಡುಮಂಗಳೂರಿನ ರೈತರಾದ ಕೆ.ಬಿ. ಕಾಂತರಾಜು ಮತ್ತು ರಾಘವೇಂದ್ರ ಅವರು ತಂದಿದ್ದ ಎರಡು ಎತ್ತಿನ ಗಾಡಿಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದವು. ಮಕ್ಕಳು ಎತ್ತಿನಗಾಡಿಯಲ್ಲಿ ಸವಾರಿ ಮಾಡಿ ಸಂಭ್ರಮಿಸಿದರು.ಜಿಲ್ಲಾ ರಕ್ತನಿಧಿಕೇಂದ್ರದ ವತಿಯಿಂದ ಸಾಹಿತ್ಯ ಸಮ್ಮೇಳನದಲ್ಲಿ ರಕ್ತದಾನ ಶಿಬಿರ ನಡೆಯಿತು. ಯುವ ಜನಾಂಗ ಸ್ವಯಂ ಪ್ರೇರಣೆಯಿಂದ ರಕ್ತದಾನದಲ್ಲಿ ಭಾಗಿಯಾಗಿದ್ದರು. ಇದರೊಂದಿಗೆ ಜಿಲ್ಲಾಸ್ಪತ್ರೆ ವತಿಯಿಂದ ಅಂಗಾAಗ ದಾನದ ಮಹತ್ವವನ್ನೂ ತಿಳಿಸಲಾಯಿತು. ದಾನಿಗಳು ಅಂಗಾAಗ ದಾನಕ್ಕೆ ಹೆಸರು ನೋಂದಾಯಿಸಿಕೊAಡರು. ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಸೇರಿದಂತೆ ಸಿಬ್ಬಂದಿಗಳು ಇದ್ದರು