ವೀರಾಜಪೇಟೆ, ಫೆ.೯: ಮಕ್ಕಳಿಗೆ ಮಹನೀಯರ ಆದರ್ಶವನ್ನು ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುವ ಮನಸ್ಥಿತಿ ತುಂಬುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ವೀರಾಜಪೇಟೆ ಡಿ.ವೈ.ಎಸ್.ಪಿ ಮಹೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಆಯೋಜಿಸಲಾದ ಸ್ಪೋರ್ಟ್ಸ್ ಸ್ಪೆಕ್ಟç ೨೦೨೬ ಕಾರ್ಯಕ್ರಮವು ನಾಂಗಾಲ ಗ್ರಾಮದಲ್ಲಿರುವ ಎಲ್.ಎಸ್.ಎಯ ನೂತನ ಕ್ಯಾಂಪಸ್ನಲ್ಲಿ ಜರುಗಿತು. ಈ ಕ್ರೀಡಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್ಪಿ ಮಹೇಶ್ ಕುಮಾರ್, ಪ್ರಸ್ತುತ ನಾವು ಪ್ರತಿಷ್ಠೆಯ ಶಿಕ್ಷಣ ವ್ಯವಸ್ಥೆಯಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣವನ್ನು ನೀಡಿದರೆ ಸಾಲದು. ಅದರೊಂದಿಗೆ ಸಾತ್ವಿಕ ಶಿಕ್ಷಣವನ್ನು ನೀಡುವಂತಹ ಜವಾಬ್ದಾರಿಯು ಪೋಷಕರ ಮೇಲಿದೆ. ನಮ್ಮ ಸಮಾಜದ ಮೂಲ, ಸಂಪ್ರದಾಯ, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ, ಇತರರಿಗೆ ತೊಂದರೆಯನ್ನು ನೀಡದಿರುವಂತಹ ರೀತಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು. ಭಾರತದ ಮಹಾನ್ ನಾಯಕರನ್ನು ಆದರ್ಶ ಪ್ರಾಯವಾಗಿ ತೆಗೆದುಕೊಂಡು ತಾವು ಕೂಡ ಮಹನೀಯರಾಗುವ ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮತ್ತೋರ್ವ ಅತಿಥಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ. ಅದರೊಂದಿಗೆ ಜೀವನ ಕೌಶಲ್ಯಗಳನ್ನು ಕಲಿಸುವತ್ತ ಗಮನಹರಿಸುತ್ತಿರುವುದು ಪ್ರಸಂಶನೀಯ. ಶಿಕ್ಷಣ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಮಕ್ಕಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.
ವೇದಿಕೆಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಪಟ್ಟಡ ಸತೀಶ್, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ , ಸಜೇಶ್ ಭರತನ್, ಕಾರ್ಯದರ್ಶಿ ಪ್ರತಿಮಾ, ಮುಖ್ಯ ಶಿಕ್ಷಕರಾದ ಮೀರ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ತರಗತಿವಾರು ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಕ್ರೀಡಾ ಸ್ಪರ್ಧೆಗಳ ಫೈನಲ್ ಪಂದ್ಯಾವಳಿಯನ್ನು ನಡೆಸಲಾಯಿತು. ಪೋಷಕರು ಹಾಗೂ ಶಿಕ್ಷಕರ ತಂಡಗಳ ನಡುವೆ ಥ್ರೋ ಬಾಲ್ ಸೌಹಾರ್ದ ಪಂದ್ಯ ನಡೆಯಿತು. ಕರಾಟೆ ವಿದ್ಯಾರ್ಥಿಗಳು ಕೆಲವು ಸಾಹಸ ಜಲಕ್ ಪ್ರದರ್ಶಿಸಿದರು. ಮೈಸೂರಿನ ಸೂರಜ್ ಪವರ್ ಬ್ಯಾಂಡ್ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸ್ಪೋರ್ಟ್ಸ್ ಸ್ಪೆಕ್ಟçದ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಲನಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಆಸಕ್ತ ಕ್ಷೇತ್ರವನ್ನು ತಿಳಿದುಕೊಂಡು ಆ ಕ್ಷೇತ್ರದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್, ಸಜೇಶ್ ಭರತನ್, ಕಾರ್ಯದರ್ಶಿ ಪ್ರತಿಮಾ, ಮುಖ್ಯ ಶಿಕ್ಷಕರಾದ ಮೀರ ಪೂಣಚ್ಚ, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.