ಶನಿವಾರಸಂತೆ, ಫೆ. ೯: ಸಮೀಪದ ಗುಡುಗಳಲೆ ಶ್ರೀಜಯದೇವ ಜಾನುವಾರುಗಳ ಜಾತ್ರೆ ಉದ್ಘಾಟನೆಯಾಗಿ ೭ ದಿನಗಳಾಗಿದ್ದು ಕೇವಲ ೩ ಜಾನುವಾರುಗಳು ಜಾತ್ರೆಗೆ ಬಂದಿವೆ. ಆದರೆ, ಜಾನುವಾರುಗಳು ಸೇರುವ ಹಿನ್ನಲೆಯಲ್ಲಿ ಜಾತ್ರಾ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದ್ದು ನಿರೀಕ್ಷೆಯಲ್ಲಿದೆ.
ನೆರೆಯ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬಾಳಿಗನಹಳ್ಳಿಯ ರೈತ ನಟರಾಜ್ ೪೪ ವರ್ಷಗಳಿಂದ ಈ ಜಾತ್ರೆಗೆ ಜಾನುವಾರುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕರೆತರುತ್ತಿದ್ದಾರೆ. ಜಾತ್ರೆಯ ಏಳು-ಬೀಳುಗಳನ್ನು ಕಂಡು ಅನುಭವಿಸಿರುವ ಇವರು ಈ ವರ್ಷದ ಜಾತ್ರಗೆ ಎರಡು ಗಬ್ಬದ ನಾಟಿ ಹಸುಗಳನ್ನು ಹಾಗೂ ಒಂದು ಗಬ್ಬದ ಜರ್ಸಿ ಹಸುವನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ತಂದಿದ್ದಾರೆ. ೨ ನಾಟಿ ಹಸುಗಳಿಗೆ ಹಾಗೂ ಜರ್ಸಿ ಹಸುವಿಗೆ ರೂ.೩೫ ಸಾವಿರ ಬೆಲೆ ನಿಗಧಿಪಡಿಸಿದ್ದಾರೆ. ಈ ಜಾನುವಾರಗಳು ಶ್ರೀಜಯದೇವ ಜಾನುವಾರು ಜಾತ್ರೆಯ ಸಂಕೇತವಾಗಿ ಜನರನ್ನು ಆಕರ್ಷಿಸುತ್ತಿವೆ.
ಈ ವರ್ಷ ಜಾತ್ರೆಯಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿಯ ವಾರದ ಸಂತೆ ನಡೆಯುತ್ತಿಲ್ಲ, ಆದರೂ ಜಾತ್ರೆಯಲ್ಲಿ ದಿನದಿಂದ ದಿನಕ್ಕೆ ಜನ ಜಂಗುಳಿ ಅಧಿಕವಾಗುತ್ತಿದೆ.
ಜಾತ್ರಾ ಮೈದಾನದಲ್ಲಿ ವಿವಿಧ ವಸ್ತುಗಳ ಅಂಗಡಿಮುAಗಟ್ಟು, ಹೊಟೇಲ್ಗಳು ಆರಂಭವಾಗಿದ್ದು ಜಾತ್ರೆ ಜನರ ಜಾತ್ರೆಯಾಗಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮನೋರಂಜನೆಗಾಗಿ ಜಾತ್ರೆಯಲ್ಲಿ ಜೈಂಟ್ ವೀಲ್, ಕೊಲಂಬಸ್, ಮಿನಿಟ್ರೆöÊನ್, ಜಾರುಬಂಡಿ, ಬ್ರೇಕ್ ಡ್ಯಾನ್ಸ್, ಇತರೆ ಮನರಂಜನೆ ಸಾಧನಗಳಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು ತರಗತಿ ಮುಗಿಸಿ ಜಾತ್ರೆಯಲ್ಲಿ ಸುತ್ತಾಡುವ ದೃಶ್ಯ ಸಾಮಾನ್ಯವಾಗಿದೆ..
ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯೇ ಶನಿವಾರಸಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಮನೋರಂಜನೆ ಒದಗಿಸುತ್ತಿರುವುದರಿಂದ ಸಂಜೆ ವೇಳೆ ಜನರು ಆರಾಮವಾಗಿ ಸಮಯ ಕಳೆಯಲೆಂದು ಜಾತ್ರೆಗೆ ಬರುತ್ತಾರೆ. ಗತ ವೈಭವ ಮರುಕಳಿಸದಿದ್ದರೂ ಜಾನಪದ ಸಂಸ್ಕೃತಿಯ ಪ್ರತೀಕವಾದ ಜಾತ್ರೆ ಜನಮನ ರಂಜಿಸಿ ಯಶಸ್ವಿಯಾಗಿ ಸಂಪನ್ನಗೊಳ್ಳಲಿದೆ.
“ ಇನ್ನೆರಡು ದಿನಗಳ ಬಳಿಕ ಜಾತ್ರೆ ರಂಗೇರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆ ಹಾಗೂ ಕ್ರೀಡಾಕೂಟಗಳು ಜರುಗಲಿರುವುದರಿಂದ ಜನರ ಸಂಖ್ಯೆಯೂ ಅಧಿಕಗೊಳ್ಳಲಿದೆ’’ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.
-ಶ.ಗ ನಯನತಾರಾ