ಸೋಮವಾರಪೇಟೆ, ಫೆ. ೯: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಡಿಕೇರಿ ವಿಭಾಗದಿಂದ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ‘ಫೀಲ್ಡ್ ಟೆಸ್ಟ್ ಕಿಟ್’ ಆಂದೋಲನ-ತರಬೇತಿ ಕಾರ್ಯಾಗಾರ ನಡೆಯಿತು.

ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಟಿ.ಪಿ. ವೀರೇಂದ್ರ ಮಾತನಾಡಿ, ಕಾಲ ಕಾಲಕ್ಕೆ ಪಂಚಾಯಿತಿಗಳು ಇಲಾಖೆಯಿಂದ ನೀಡಿರುವ ಫೀಲ್ಡ್ ಟೆಸ್ಟ್ ಕಿಟ್‌ಗಳನ್ನು ಉಪಯೋಗಿಸಿ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷಿಸಿ ವರದಿಯನ್ನು ಪಡೆಯಬೇಕು. ಒಂದು ವೇಳೆ ಕಲುಷಿತ ಹಾಗೂ ಕುಡಿಯಲು ಯೋಗ್ಯವಲ್ಲವೆಂದು ಕಂಡು ಬಂದಲ್ಲಿ ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಬೇಕೆಂದು ಸೂಚನೆ ನೀಡಿದರು.

ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಅಂಗನವಾಡಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಉಪಯೋಗಿಸುವ ನೀರಿನ ಮಾದರಿಗಳನ್ನೂ ಸಹ ಪರೀಕ್ಷಿಸಬೇಕೆಂದು ನಿರ್ದೇಶನ ನೀಡಿದರು.

ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಹಾಗೂ ರಾಕೇಶ್, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಪುಟ್ಟಸ್ವಾಮಿ, ಸಿಬ್ಬಂದಿಗಳಾದ ಮಂಜು, ಪ್ರಯೋಗಾಲಯ ಸಿಬ್ಬಂದಿಗಳಾದ ಪ್ರವೀಣ್, ರಿಷಿಕಾ, ಶರತ್, ತ್ಯಾಗರಾಜು ಮತ್ತಿತರರು ಇದ್ದರು.