ಸೋಮವಾರಪೇಟೆ, ಫೆ. ೯: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ಕಳೆದ ವಾರ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ತನ್ನ ಮನೆಯನ್ನು ಕಳೆದುಕೊಂಡ ವೃದ್ಧೆ ಪುಷ್ಪ ಅವರ ಸಂಕಷ್ಟಕ್ಕೆ ಸ್ಪಂದಿಸಿರುವ ದಾನಿ ಹಾಗೂ ಸಮಾಜ ಸೇವಕ ಕಿರಗಂದೂರು ಪದ್ಮನಾಭ್ ಅವರು ರೂ. ೫೦ ಸಾವಿರ ನೆರವು ಒದಗಿಸಿದರು.
ಕಳೆದ ವಾರವಷ್ಟೇ ಪುಷ್ಪ ಅವರ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ಮನೆಯಲ್ಲಿದ್ದ ಅಜ್ಜಿ ಹಾಗೂ ಮೊಮ್ಮಗ ಪ್ರಾಣಾಪಾಯದಿಂದ ಪಾರಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಮೊಮ್ಮಗನನ್ನು ಪೋಷಣೆ ಮಾಡುತ್ತಿದ್ದ ಪುಷ್ಪ ಅವರು ಬೀದಿಗೆ ಬಂದಿದ್ದು, ಸಾಮಾಜಿಕ ಕಾರ್ಯಕರ್ತ ಕಿರಗಂದೂರು ಪದ್ಮನಾಭ್ ಅವರು, ಹೊಸ ಮನೆ ನಿರ್ಮಿಸಲು ರೂ. ೫೦ ಸಾವಿರ ಸಹಾಯ ಧನ ನೀಡಿದರು. ಈ ಸಂದರ್ಭ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಕೆ.ಎನ್. ದೀಪಕ್, ಕೆಟಿಡಿಓ ತಾಲೂಕು ಅಧ್ಯಕ್ಷ ಹೆಚ್.ಕೆ. ವಸಂತ್ ಸೇರಿದಂತೆ ಇತರರು ಇದ್ದರು.