ಪೊನ್ನಂಪೇಟೆ, ಫೆ. ೯: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನ ೩ ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ.

ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದ ಬಾಚಮಾಡ ಪ್ರಕಾಶ್ ರಾಜಪ್ಪ ಎಂಬವರ ೨ ಹಸುಗಳನ್ನು ತಾ. ೮ ರಂದು ಸಂಜೆ ೭ ಗಂಟೆ ಸಮಯದಲ್ಲಿ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಅದೇ ದಿನ ಸುಮಾರು ೧೦೦ ಮೀಟರ್ ದೂರದಲ್ಲಿ ಬಲ್ಲಿಮಾಡ ಸಂಪತ್ ಎಂಬವರ ೮ ತಿಂಗಳ ತುಂಬು ಗರ್ಭಿಣಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿ, ಹೊಟ್ಟೆಯಲ್ಲಿದ್ದ ೮ ತಿಂಗಳ ಕರುವಿನ ದೇಹವನ್ನು ತಿಂದು ಹಾಕಿರುವ ಘಟನೆ ನಡೆದಿದೆ.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬೆಸಗೂರು ಗ್ರಾಮದ ಕೊಕ್ಕಲೆಮಾಡ ದಾದ ಸೋಮಯ್ಯ ಅವರ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದ್ದ ಘಟನೆ ನಡೆದಿದ್ದಾಗ ಗ್ರಾಮಸ್ಥರು ಹಾಗೂ ರೈತ ಸಂಘದ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದರು. ಅರಣ್ಯ ಇಲಾಖೆಯವರು ಹುಲಿಯ ಚಲನವಲನ ಕಂಡು ಹಿಡಿಯಲು ಟ್ರಾಪ್ ಕ್ಯಾಮೆರಾ ಅಳವಡಿಸಿ, ಬೋನ್ ಇರಿಸಿದ್ದರು. ಆದರೆ ಹುಲಿಯ ಚಲನವಲನ ಕಂಡು ಬಾರದ ಹಿನ್ನೆಲೆಯಲ್ಲಿ, ಹುಲಿ ಹಿಡಿಯುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.

ಆದರೆ ಮತ್ತೆ ತಾ. ೮ ರಂದು ೩ ಹಸುಗಳ ಮೇಲೆ ಹುಲಿ ದಾಳಿಮಾಡಿ ಕೊಂದು ಹಾಕಿರುವ ಘಟನೆ ತಿಳಿದು ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದರು.

ಸುಮಾರು ೩ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳಾದ ಎಸಿಎಫ್ ಗೋಪಾಲ್ ಹಾಗೂ ಆರ್ ಎಫ್ ಓ ಗಂಗಾಧರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಎಸಿಎಫ್ ಗೋಪಾಲ್ ಅವರು ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಘಟನಾ ಸ್ಥಳಕ್ಕೆ ಬರುವಂತೆ ಮನವಿ ಮಾಡಿಕೊಂಡ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಕೈಬಿಡಲಾಯಿತು.

ಈ ಸಂದರ್ಭ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಅವರ ಸೂಚನೆ ಮೇರೆಗೆ ಘಟನಾ ಸ್ಥಳಕ್ಕೆ ಕೊಡಗು ಜಿಲ್ಲಾ ಸಿ ಸಿ ಎಫ್ ಸೋನಲ್ ವೃಷ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪೊನ್ನಂಪೇಟೆ ತಾಲೂಕಿನ ಬೆಸಗೂರು ಗ್ರಾಮದಲ್ಲಿ ಒಂದೇ ದಿನ ಹುಲಿ ದಾಳಿಗೆ ೩ ಹಸುಗಳು ಬಲಿಯಾಗಿರುವ ಬಗ್ಗೆ, ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ, ಹುಲಿ ಸೆರೆಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಸೂಕ್ತ ತಯಾರಿ ಮಾಡಿಕೊಂಡು, ಸಾಕಾನೆ ಗಳನ್ನು ಹಾಗೂ ಶಾರ್ಪ್ ಶೂಟರ್ ಗಳನ್ನು ಕರೆಸಿ, ತಾ.೧೦ ರಿಂದ (ಇಂದಿನಿAದ) ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದರು.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ಅವರು ಭೇಟಿ ನೀಡಿ, ಕೊಡಗು ಸಿ ಸಿ ಎಫ್ ಸೋನಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ರೈತರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದನೆ ನೀಡದೇ, ಬೇಜವಾಬ್ದಾರಿತನ ತೋರುವ ಅಧಿಕಾರಿಗಳು ಕೊಡಗಿಗೆ ಬೇಕಾಗಿಲ್ಲ. ಶಾಸಕರು ಹಾಗೂ ಉಸ್ತುವಾರಿ ಮಂತ್ರಿಗಳು ದಯಮಾಡಿ ಇಂತಹ ಅರಣ್ಯ ಇಲಾಖೆ ಅಧಿಕಾರಿಗಳನ್ನು ನಮ್ಮ ಜಿಲ್ಲೆಯಿಂದ ಹೊರಹಾಕಿ, ಉತ್ತಮ ಅಧಿಕಾರಿಗಳನ್ನು ಕೊಡಗಿಗೆ ನೇಮಕ ಮಾಡುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭ ಹಸುವಿನ ಮಾಲೀಕ ಬಾಚಮಾಡ ಪ್ರಕಾಶ್ ರಾಜಪ್ಪ ಮಾತನಾಡಿ, ಕಳೆದ ಎರಡು ವರ್ಷದ ಅವಧಿಯಲ್ಲಿ ನಮ್ಮ ೫ ಹಸುಗಳನ್ನು ಹುಲಿ ಕೊಂದು ಹಾಕಿದೆ. ಇದರಿಂದ ರೈತರಿಗೆ ದನ ಕರುಗಳನ್ನು ಸಾಕುವುದೇ ಒಂದು ರೀತಿಯಲ್ಲಿ ದುಃಖದ ಸಂಗತಿಯಾಗಿದೆ. ವ್ಯಾಘ್ರನ ಅಟ್ಟಹಾಸದಿಂದ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದಷ್ಟು ಶೀಘ್ರ ಹುಲಿಯನ್ನು ಸೆರೆಹಿಡಿಯಬೇಕಾಗಿ ಒತ್ತಾಯಿಸಿದರು.

ಮಾಚಿಮಾಡ ರವೀಂದ್ರ ಮಾತನಾಡಿ, ಆದಷ್ಟು ಶೀಘ್ರ ಹುಲಿ ಸೆರೆ ಹಿಡಿಯದಿದ್ದರೆ ರಸ್ತೆ ತಡೆ ನಡೆಸಿ ತೀವ್ರ ಹೋರಾಟ ಮಾಡಲಾಗುವುದು ಎಂದರು. ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ರೈತ ಸಂಘದ ಪ್ರಮುಖರಾದ ಚೊಟ್ಟೆಕಾಳಪಂಡ ಮನು, ಮೇಚಮಾಡ ರಾಜಪ್ಪ, ಪುಚ್ಚಿಮಾಡ ಸಂತೋಷ್, ರೈತ ಸಂಘದ ಸದಸ್ಯರು, ಬೆಸಗೂರು ಗ್ರಾಮ ಪಂಚಾಯಿತಿ ಸದಸ್ಯ ಚಟ್ರುಮಾಡ ಬೋಪಣ್ಣ, ಅರಮಣಮಾಡ ರಚನ್, ಪುಳ್ಳಂಗಡ ಉದಯ ಪೂಣಚ್ಚ, ಬಾಚಮಾಡ ಶೀಲಾಲ್, ಪುಳ್ಳಂಗಡ ಬೆಳ್ಯಪ್ಪ, ಪೊನ್ನಿಮಾಡ ದರ್ಶನ್, ಅರಮಣಮಾಡ ಶಂಕರಿ, ಎಸಿಎಫ್ ಗೋಪಾಲ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಪೊನ್ನಂಪೇಟೆ ಉಪ ವಲಯ ಅರಣ್ಯಾಧಿಕಾರಿ ದಿವಾಕರ್, ಗಸ್ತು ಅರಣ್ಯ ಪಾಲಕ ಅಣ್ಣಯ್ಯ, ಆರ್‌ಆರ್‌ಟಿ ಸಿಬ್ಬಂದಿಗಳು, ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ನವೀನ್ ಹಾಗೂ ಸಿಬ್ಬಂದಿಗಳು ಇದ್ದರು. ವರದಿ : ಚನ್ನನಾಯಕ