ಗೋಣಿಕೊಪ್ಪಲು, ಫೆ. ೯: ಕಳೆದ ೫ ವರ್ಷಗಳಿಂದ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಿಂದ ಮಂಜೂರಾದ ಅನುದಾನದಿಂದ ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಮಗ್ರ ವರದಿಯನ್ನು ಅಂಕಿ ಅಂಶ ಸಹಿತ ನೀಡುವ ಮೂಲಕ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಮೆಚ್ಚುಗೆಗೆ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾತ್ರವಾಯಿತು.
ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ೨೦೨೫-೨೬ನೇ ಸಾಲಿನ ಗ್ರಾಮ ಸಭೆಯು ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಇಓ ಲಲಿತ, ಕುಟ್ಟಂದಿ ಗ್ರಾಮದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಬಿ.ಎಸ್. ಶಾಂತಿ ಅವರ ಕಾರ್ಯವನ್ನು ಶ್ಲಾಘಿಸಿ ಪಂಚಾಯಿತಿ ವತಿಯಿಂದ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶೇಷಚೇತನರ ಶೇ.೫ರ ಅನುದಾನದಲ್ಲಿ ಗ್ರಾಮದಲ್ಲಿನ ೨೬ ಫಲಾನುಭವಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಫ್ಯಾನ್ಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಕಳೆದ ಸಾಲಿನ ಗ್ರಾಮ ಸಭೆಯ ವರದಿ, ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ವಿವರ ಒದಗಿಸಿದರು. ಸಭೆಯಲ್ಲಿ ಪ್ರಮುಖವಾಗಿ ಕಾಡಾನೆಗಳ ಉಪಟಳದ ಬಗ್ಗೆ ಗ್ರಾಮದ ಪ್ರಮುಖರಾದ ಲಾಲಾ ಭೀಮಯ್ಯ, ಮಾಜಿ ಜಿ.ಪಂ. ಸದಸ್ಯೆ ಭವ್ಯ, ಉಮೇಶ್ ಕೇಚಮಯ್ಯ, ತೀತಿಮಾಡ ಸದನ್ ಮತ್ತಿತರರು ಅಧ್ಯಕ್ಷರ ಗಮನ ಸೆಳೆದರು. ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಕಾಡಾನೆಗಳ ನಿಯಂತ್ರಣಕ್ಕೆ ಈಗಾಗಲೇ ರೈಲ್ವೆ ಬ್ಯಾರಿಕೇಡ್, ಆನೆ ಕಂದಕ ಹಾಗೂ ಸೋಲಾರ್ ಬೇಲಿ ನಿರ್ಮಾಣ ಮಾಡಲು ಶಾಸಕ ಎ.ಎಸ್. ಪೊನ್ನಣ್ಣ ಅನುದಾನ ಬಿಡುಗಡೆಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ.
ಕಾಡಾನೆಯ ನಿಯಂತ್ರಣಕ್ಕೆ ರೇಡಿಯೋ ಕಾಲರ್ ಅಳವಡಿಸುವ ಬಗ್ಗೆ ಈ ಹಿಂದೆ ಅಧಿಕಾರಿಗಳು ಜನಪ್ರತಿನಿಧಿಗಳ ಮುಂದೆ ಭರವಸೆ ನೀಡಿದ್ದರು. ಆದರೆ ಭರವಸೆ ಇನ್ನು ಕೂಡ ಈಡೇರಿಲ್ಲ. ಕಾಡಾನೆಗಳ ನಿರಂತರ ಉಪಟಳದ ಹಿನ್ನಲೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದಲ್ಲಿ ಜನ ಸಂಪರ್ಕ ಸಭೆ ಕರೆಯಲು ಗ್ರಾಮಸ್ಥರು ಅಧ್ಯಕ್ಷರಿಗೆ ಮನವಿ ಮಾಡಿದರು. ಗ್ರಾಮಸ್ಥರ ಅಭಿಪ್ರಾಯ ಆಲಿಸಿದ ಕೊಲ್ಲಿರ ಬೋಪಣ್ಣ ಈ ಬಗ್ಗೆ ಕ್ಷೇತ್ರದ ಶಾಸಕರ ಗಮನ ಸೆಳೆಯುವ ಮೂಲಕ, ಸಭೆ ಆಯೋಜಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಲ್ಲಿರ ಬೋಪಣ್ಣ, ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಗ್ರಾಮದ ಅಭಿವೃದ್ಧಿಗೆ ನಿರೀಕ್ಷೆಗೂ ಮೀರಿ ಕೆಲಸ ನಿರ್ವಹಿಸಿದ್ದೇನೆ. ಗ್ರಾಮದ ಜನತೆಗೆ ಕೈಲಾದ ಸಹಾಯ ನೀಡಿದ್ದೇನೆ. ಇದೀಗ ನನ್ನ ಅವಧಿಯಲ್ಲಾದ ಕಾಮಗಾರಿಯ ವಿವರಗಳನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದೇನೆ. ಮುಂದೆ ಯಾರೆ ಅಧಿಕಾರ ವಹಿಸಿಕೊಂಡರೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಗ್ರಾಮಸ್ಥರಿಗೆ ಸ್ಪಂದÀನೆ ನೀಡುತ್ತಿಲ್ಲ ಹಾರಿಕೆಯ ಉತ್ತರಗಳನ್ನು ನೀಡುತ್ತಾರೆ ಎಂದು ಜಿ.ಪಂ. ಮಾಜಿ ಸದಸ್ಯೆ ಭವ್ಯ ಆರೋಪ ಮಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾ.ಪಂ. ಅಧ್ಯಕ್ಷರು ಸಮಜಾಯಿಷಿಕೆ ನೀಡಲು ಮುಂದಾದರು. ಆದರೂ ಕೆಲ ಗ್ರಾಮಸ್ಥರು ತಮ್ಮ ಅಸಮಾಧಾನವನ್ನು ಹೊರಹಾಕಿದರು. ನಾನೇನು ತಪ್ಪು ಮಾಡಿಲ್ಲ ಎಂದು ಪಿಡಿಓ ಪರಮೇಶ್ ಸಮಜಾಯಿಷಿಕೆ ನೀಡುವ ಪ್ರಯತ್ನ ಮಾಡಿದರು. ೩ ಪಂಚಾಯಿತಿಗಳ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ.
ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ವರ್ಗಾವಣೆ ಮಾಡಿಸಿಕೊಂಡು ಹೋಗುವುದಾಗಿ ಸಭೆಗೆ ತಿಳಿಸಿದರು. ಈ ವೇಳೆ ಮಾತಿನ ಚಕಮಕಿ ಹೆಚ್ಚಾಗಿ ಮಧ್ಯ ಪ್ರವೇಶಿಸಿದ ಹಿರಿಯರಾದ ಲಾಲಾ ಭೀಮಯ್ಯ, ಉಮೇಶ್ ಕೇಚಮಯ್ಯ ಮತ್ತಿತರರು ಸಭೆಯನ್ನು ನಿಯಂತ್ರಣಕ್ಕೆ ತಂದರು.
ಸಭೆಯಲ್ಲಿ ವಿದ್ಯುತ್, ಕುಡಿಯುವ ನೀರು ಹಾಗೂ ಸ್ಮಶಾನಕ್ಕೆ ಜಾಗವನ್ನು ಕಾದಿರಿಸುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದರು. ಸಭೆಯಲ್ಲಿ ಪೊಲೀಸ್ ಅಧಿಕಾರಿ ವೆಂಕಟೇಶ್ ಮಾತನಾಡಿ, ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾದೇಶದ ಕಾರ್ಮಿಕರು ಕೊಡಗಿಗೆ ಲಗ್ಗೆ ಇಡುತ್ತಿರುವ ಬಗ್ಗೆ ಮಾಹಿತಿಯಿದೆ. ತೋಟದ ಮಾಲೀಕರು ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂದರ್ಭ ನಿಖರವಾದ ಮಾಹಿತಿಯನ್ನು ಪಡೆÀದು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು.
ಅವರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಸಮೀಪದ ಠಾಣಾಧಿಕಾರಿಗಳನ್ನು ಭೇಟಿ ಮಾಡುವಂತೆ ಸಲಹೆ ನೀಡಿದರು. ಅಲ್ಲದೆ ಕಾಫಿ ಬೆಳೆಗಾರರು ತಮ್ಮಲ್ಲಿ ಬಳಕೆ ಮಾಡದೆ ಇರುವ ಕೋವಿಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಅದರ ವಿವರವನ್ನು ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾವೇರಮ್ಮ, ಸದಸ್ಯರುಗಳಾದ ನೇತ್ರಾವತಿ, ಎಂ.ಪಿ. ಗಣಪತಿ, ಬಿ.ಎಂ. ಜಗದೀಶ್, ಕೆ.ಎಸ್. ಲಕ್ಷಿö್ಮ, ಸಿಬ್ಬಂದಿಗಳಾದ ಹೇಮಲತ, ಸೌಮ್ಯ, ವಿನೋದ್, ಕಾವ್ಯ, ಗಣೇಶ್, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.