ಪೊನ್ನಂಪೇಟೆ, ಫೆ. ೯: ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ನಿರ್ಮಿಸಲಾದ ಶಾಲಾ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ನೂತನವಾಗಿ ನಿರ್ಮಿಸಲಾದ ಎರಡು ಕೊಠಡಿಗಳ ಉದ್ಘಾಟನೆಯನ್ನು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ನೆರವೇರಿಸಿದರು. ನಂತರ ಮಾತನಾಡಿದ ಪೊನ್ನಣ್ಣ ಅವರು ೨೫ ಲಕ್ಷ ರೂಪಾಯಿಗಳ ಅನುದಾನದಲ್ಲಿ ಈ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಾಲಾ ಕೊಠಡಿಗಳು ಅಗತ್ಯವಾಗಿದ್ದು, ವಿದ್ಯಾರ್ಥಿಗಳನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡುವ ಜವಾಬ್ದಾರಿ ಪೋಷಕರು, ಶಿಕ್ಷಕರು ಹಾಗೂ ಎಲ್ಲಾ ನಾಗರೀಕರ ಮೇಲಿದೆ ಎಂದರು.
ಶಾಲೆಯ ಕಚೇರಿ ಉಪಯೋಗಕ್ಕೆ ಉದಾರವಾಗಿ ಪೀಠೋಪಕರಣ ನೀಡಿದ ಬೆಂಗಳೂರಿನ ಪೆನ್ಷನರ್ಸ್ ಅಸೋಸಿಯೇಷನ್ ಸಂಘದ ಪದಾಧಿಕಾರಿಗಳ ಕಾರ್ಯವನ್ನು ಶಾಸಕರು ಈ ಸಂದರ್ಭ ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಅತಿಥಿ ಬೆಂಗಳೂರಿನ ಪೆನ್ಷನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರಾಧಾಕೃಷ್ಣನ್ ಮಾತನಾಡಿ, ೨೦೧೦ ರಲ್ಲಿ ಸಂಘ ಸ್ಥಾಪನೆ ಮಾಡಿ ೨೦೧೩ ರಿಂದ ಸೇವಾ ಕಾರ್ಯ ಮಾಡುತ್ತಾ ಬರುತ್ತಿದ್ದೇವೆ. ಸಂಘದ ಸದಸ್ಯರ ವಂತಿಗೆಯಿAದ ಶಾಲೆಗೆ ಸಹಾಯ ಮಾಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಎಸ್‌ಡಿಎಂಸಿ ಅಧ್ಯಕ್ಷ ಜುನೈದ್ ಮಾತನಾಡಿ ಶಾಸಕರು ಮುತುವರ್ಜಿ ವಹಿಸಿ ಅನುದಾನ ಬಿಡುಗಡೆಗೊಳಿಸಿದ ಕಾರಣ ಶೀಘ್ರವಾಗಿ ಶಾಲಾ ಕೊಠಡಿ ನಿರ್ಮಾಣವಾಗಲು ಸಾಧ್ಯವಾಗಿದೆ ಎಂದರು.
ಶಾಲೆಗೆ ೫ ನೂತನ ಕೊಠಡಿಗಳ ನಿರ್ಮಾಣಕ್ಕೆ ರೂ. ೮೦ ಲಕ್ಷ ಅನುದಾನ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭ ಮಾಡುವಂತೆ, ವಾಲಿಬಾಲ್ ಕೋರ್ಟ್ ನಿರ್ಮಾಣ, ವಿದ್ಯಾರ್ಥಿಗಳ ಭದ್ರತೆಗೆ ಅನುಕೂಲ ಆಗುವಂತೆ ಶಾಲಾ ಆವರಣಕ್ಕೆ ಕಾಂಪೌAಡ್ ನಿರ್ಮಾಣ , ಕಾರ್ಯಕ್ರಮ ನಡೆಸಲು ವೇದಿಕೆ ನಿರ್ಮಾಣ ಹಾಗೂ ಭೋಜನಾಲಯ ನಿರ್ಮಿಸಿ ಕೊಡುವಂತೆ ಶಾಲೆ ವತಿಯಿಂದ ಶಾಸಕರಿಗೆ ಮನವಿ ನೀಡಲಾಯಿತು.
ಈ ಸಂದರ್ಭ ಶಾಸಕ ಎ. ಎಸ್. ಪೊನ್ನಣ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಪೆನ್ಷನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರಾಧಾಕೃಷ್ಣನ್, ಉಪಾಧ್ಯಕ್ಷೆ ತಾರಾ, ೧೦ ವರ್ಷ ಸಿ ಆರ್ ಪಿ ಯಾಗಿ ಸೇವೆ ಸಲ್ಲಿಸಿದ ಶಿಕ್ಷಕ ತಿರುನೆಲ್ಲಿಮಾಡ ಜೀವನ್, ಸೇವಾ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲೀರ ರಶೀದ್, ಸದಸ್ಯ ಜುನೈದ್, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಆಧ್ಯಕ್ಷ ಕಾಳಿಮಾಡ ಪ್ರಶಾಂತ್, ಬಿ ಆರ್ ಪಿ ಮಹೇಶ್, ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಸಾರ್ವಜನಿಕರು ಹಾಜರಿದ್ದರು. ನಿಂಗರಾಜು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ವಿಜಯ್ ಬಿ. ಎಂ ಸ್ವಾಗತಿಸಿದರು. ಗಂಗಾಮಣಿ ವಂದಿಸಿ, ರೋಜಿ ಹಾಗೂ ವಿನಿತ ಕಾರ್ಯಕ್ರಮ ನಿರೂಪಿಸಿದರು.