ಕಣಿವೆ, ಫೆ. ೯: ಈ ಬಾರಿ ಬೇಸಿಗೆ ಇನ್ನೂ ಆರಂಭವಾಗಬೇಕಷ್ಟೆ. ಆದರೆ ಜೀವನದಿ ಕಾವೇರಿ ಒಳಹರಿವಿನಲ್ಲಿ ಬದಲಾವಣೆ ಕಂಡು ಬರುತ್ತಿದೆ.
ಅಂದರೆ ನದಿಯಲ್ಲಿನ ನೀರು ಹರಿವು ದಿನ ಕಳೆದಂತೆ ಕ್ಷೀಣವಾಗುತ್ತಲೇ ಇದೆ. ಹಾಗಾಗಿ, ಪ್ರಮುಖ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರಕ್ಕೆ ಧಾವಿಸುವ ಪ್ರವಾಸಿಗರು ದುಬಾರೆಯ ಕಾವೇರಿ ನದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದಾರೆ.
ಪಾದಚಾರಿಗಳಿಗೆ ಸ್ವಾಭಾವಿಕವಾಗಿ ಪ್ರಕೃತಿಯೇ ದಾರಿ ಮಾಡಿಕೊಟ್ಟಂತೆ ಭಾಸವಾಗುವ ಕಾವೇರಿ ನದಿಯಲ್ಲಿ ಈಕಡೆ ದಂಡೆಯಿAದ ಆಕಡೆ ದಂಡೆಗೆ ಜೋಡಿಸಿದಂತಿರುವ ಕರಿ ಕಲ್ಲುಗಳನ್ನು ತೊಳೆದಂತೆ ಮೇಲೆ ಹರಿವ ಕಾವೇರಿ ನೀರಲ್ಲಿ ಹೆಜ್ಜೆ ಇಟ್ಟು ಪ್ರವಾಸಿಗರು ತೆರಳುತ್ತಿರುವುದು ಗೋಚರವಾಗುತ್ತಿದೆ. ವಾರಾಂತ್ಯದ ದಿನಗಳಲ್ಲಿ ಹಿಂಡು ಹಿಂಡು ಧಾವಿಸುವ ಪ್ರವಾಸಿಗರಿಗೆ ಕಾವೇರಿ ನದಿಯಲ್ಲಿ ಈ ಸಂದರ್ಭ ಒಂದಷ್ಟು ಮನರಂಜನೆಯನ್ನು ಕೂಡ ಪಡೆವ ಪ್ರವಾಸಿಗರು ಕಾಲ್ನಡಿಗೆಯಲ್ಲಿ ನೀರಲ್ಲಿ ಸಾಗುತ್ತಾ ಸಾಕಾನೆ ಶಿಬಿರದ ಸೊಬಗು ಸವಿಯುತ್ತಿದ್ದಾರೆ.
ನದಿಯಲ್ಲಿ ಸಾಗುವ ಹಲವು ಮಂದಿ ನೀರು ಹರಿವ ಕರಿ ಕಲ್ಲ ಮೇಲೆ ಕಾಲಿಡುವ ಸಂದರ್ಭದಲ್ಲಿ ಕೆಲವು ಬಾರಿ ಕಾಲು ಜಾರುತ್ತಿದ್ದು ಈ ಸಂದರ್ಭ ತಾವು ಬಿದ್ದರೂ ಚಿಂತೆಯಿಲ್ಲ. ಕೈಯಲ್ಲಿರುವ ಸಂಗಾತಿ ಮೊಬೈಲ್ ಮಾತ್ರ ನೀರಿನಲ್ಲಿ ಬೀಳಬಾರದು ಎಂದು ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಕೆಲವೊಮ್ಮೆ ಅವರ ಅರಿವಿಗೆ ಬರದಂತೆ ನೀರ ಮೇಲಿನ ಕಲ್ಲುಗಳ ಜೊತೆಗಿನ ಸಂತಸದ ನಡಿಗೆಯಲ್ಲಿ ಕೆಲವರು ಬಿದ್ದು ಸೊಂಟ, ಕೈಕಾಲು ನೋವು ಮಾಡಿಕೊಂಡವರೂ ಇದ್ದರೆ, ಕೆಲವರ ಮೊಬೈಲ್‌ಗಳು ನೀರೊಳಗೆ ಬಿದ್ದು ತೆಗೆಯುವಷ್ಟರಲ್ಲಿ ಮೊಬೈಲ್‌ನೊಳಗೆ ನೀರು ಸೇರಿ ಹಾನಿಯಾಗುತ್ತಿರುವ ಪ್ರಸಂಗಗಳು ಜರುಗುತ್ತಿವೆ.
ಗಿರಿಜನರಿಗೆ ಅರಣ್ಯ ಇಲಾಖೆಯ ದೋಣಿ
ಕಾವೇರಿ ನದಿಯಲ್ಲಿ ಸಮರ್ಪಕವಾಗಿ ನೀರಿನ ಹರಿವು ಇದ್ದಷ್ಟು ದಿನಗಳ ಕಾಲ ಇಲ್ಲಿ ಬಾಡಿಗೆಯ ದೋಣಿಗಳು ಕಾರ್ಯಾಚರಿಸುತ್ತಿದ್ದವು. ಆದರೆ ನದಿಯಲ್ಲಿ ನೀರು ಇಳಿಮುಖವಾದೊಡನೆ ದೋಣಿಗಳು ಹಾನಿಯಾಗುವ ಸಂಭವ ಇರುವುದರಿಂದ ಖಾಸಗಿಯವರ ದೋಣಿಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು, ಅರಣ್ಯ ಇಲಾಖೆಯ ಯಾಂತ್ರಿಕ ದೋಣಿಯು ಇದ್ದು ಅದು ಕೇವಲ ದುಬಾರೆಯ ಸಾಕಾನೆ ಶಿಬಿರದ ಗಿರಿಜನ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ.