ಸಿದ್ದಾಪುರ, ಫೆ. ೯: ಬೈಕ್ ಸವಾರನ ಮೇಲೆ ಒಂಟಿ ಸಲಗ ದಾಳಿಗೆ ಯತ್ನಿಸಿದ್ದು, ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ರೆಸಾರ್ಟ್ಗೆ ಕೆಲಸಕ್ಕೆ ಬೆಳಿಗ್ಗೆ ೬ ಗಂಟೆ ವೇಳೆಗೆ ಸಿದ್ದಾಪುರ ನಿವಾಸಿ ಪುಟ್ಟಸ್ವಾಮಿ ಅವರು ಬೈಕ್ನಲ್ಲಿ ತೆರಳುತ್ತಿದ್ದ ಕರಡಿಗೋಡು ಶಾಲೆಯ ಸಮೀಪದ ತಿರುವಿನಲ್ಲಿ ಕಾಫಿ ತೋಟದಿಂದ ಒಂಟಿ ಸಲಗ ಹಠಾತ್ತನೆ ಬೈಕಿಗೆ ಅಡ್ಡ ಬಂದು ಬೈಕ್ ಸವಾರನ ಮೇಲೆ ದಾಳಿಗೆ ಮುಂದಾಗಿದೆ. ಈ ಸಂದರ್ಭ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಓಡಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಕಾಡಾನೆ ಬೇರೆ ಸ್ಥಳಕ್ಕೆ ತೆರಳಿದ ನಂತರ ಸ್ಥಳೀಯರ ನೆರವಿನಿಂದ ತಮ್ಮ ಬೈಕನ್ನು ತೆಗೆದುಕೊಂಡು ಕೆಲಸಕ್ಕೆ ತೆರಳಿದ್ದಾರೆ. ಈ ಭಾಗದಲ್ಲಿ ಒಂಟಿ ಸಲಗ ಒಂದು ಕಳೆದ ಹಲವು ದಿನಗಳಿಂದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧÀಲೆ ನಡೆಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.