ಗೋಣಿಕೊಪ್ಪಲು, ಫೆ. ೯: ಜನರ ಸೇವೆಗೆ ಸೇವಾ ಕೇಂದ್ರವಾಗುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರದ ಸಭಾಂಗಣವು ಜನತೆಯ ಉಪಯೋಗಕ್ಕೆ ಸದ್ಬಳಕೆಯಾಗಲಿ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಕರೆ ನೀಡಿದರು.

ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿಯ ಗಾಂಧಿ ಗ್ರಾಮ ಪುರಸ್ಕಾರದ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಮಾಯಮುಡಿ ಗ್ರಾಮ ಪಂಚಾಯಿತಿ ಉತ್ತಮ ಪಂಚಾಯಿತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೊಡಗಿಗೆ ಮಾದರಿ ಪಂಚಾಯಿತಿಗಳಲ್ಲಿ ಒಂದಾಗಿದೆ. ಸರ್ಕಾರದಿಂದ ಲಭಿಸಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಾದರಿ ಸಭಾಂಗಣವನ್ನು ನಿರ್ಮಿಸಿರುವುದು ಶ್ಲಾಘನೀಯ.ಸುತ್ತಮುತ್ತಲಿನ ಜನತೆಯ ಕಾರ್ಯಕ್ರಮಗಳಿಗೆ ಈ ಸಭಾಂಗಣವು ಪ್ರಯೋಜನಕಾರಿಯಾಗಲಿ. ಪಂಚಾಯಿತಿ ಸದಸ್ಯರು ಪಕ್ಷಾತೀತವಾಗಿದ್ದುದರಿಂದ ಮಾತ್ರ ಇಂತಹ ಕಾರ್ಯ ಮಾಡಲಾಗಿದೆ. ಪಂಚಾಯಿತಿ ಮಟ್ಟದಲ್ಲಿ ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

ಮಾಯಮುಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಗ್ರಾಮದ ಜನತೆಯ, ಸಂಘ ಸಂಸ್ಥೆಯ, ಪಂಚಾಯಿತಿ ಸಿಬ್ಬಂದಿಗಳ ಹಾಗೂ ಪಂಚಾಯಿತಿ ಸದಸ್ಯರುಗಳ ಶ್ರಮದಿಂದ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ೫ ಲಕ್ಷ ಅನುದಾನ ಗಾಂಧಿ ಗ್ರಾಮ ಪುರಸ್ಕಾರದಿಂದ ಲಭಿಸಿದೆ. ಶಾಸಕ ಎ.ಎಸ್.ಪೊನ್ನಣ್ಣನವರು ತಮ್ಮ ಅನುದಾನದಿಂದ ೫ ಲಕ್ಷ ನೀಡಿದ್ದಾರೆ. ೨ ಲಕ್ಷ ಅನುದಾನವನ್ನು ಪಂಚಾಯಿತಿ ನಿಧಿಯಿಂದ ಬಳಸಿಕೊಂಡು ೧೨ ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದ ಜನತೆಗೆ ಈ ಸಭಾಂಗಣವು ಸಭೆ ನಡೆಸಲು ಅನುಕೂಲವಾಗಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಹಲವು ದಶಕಗಳ ನಂತರ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಶ್ಲಾಘನೀಯ. ಲಭಿಸಿರುವ ಪ್ರಶಸ್ತಿಯು ಒಬ್ಬ ವ್ಯಕ್ತಿಗೆ ಸೀಮಿತವಾದುದಲ್ಲ. ಇಡೀ ಗ್ರಾಮಕ್ಕೆ ಸಂದಿರುವ ಗೌರವ. ಅಭಿವೃದ್ದಿ ಕಾರ್ಯದಲ್ಲಿ ಟೀಕೆ ಟಿಪ್ಪಣಿಗಳಿರಬೇಕು, ಅದು ಆರೋಗ್ಯಕರವಾಗಿರಬೇಕು. ಆಡಳಿತ ಹಾಗೂ ಅಭಿವೃದ್ದಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟಿರುವ ಅನುದಾನವು ನಿಗದಿತ ಸಮಯದಲ್ಲಿ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಶಾಸಕ ಎ.ಎಸ್.ಪೊನ್ನಣ್ಣ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ನಿಗದಿತ ಸಮಯದ ಒಳಗೆ ನೂತನ ಸಭಾಂಗಣ ನಿರ್ಮಿಸಿದ ಗುತ್ತಿಗೆದಾರರನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್,ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೋಪಣ್ಣ, ಪಂಚಾಯಿತಿ ಉಪಾಧ್ಯಕ್ಷ ಪಿ.ಎಸ್.ಶಾಂತ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪೊನ್ನಿಮಾಡ ಸರಸ್ವತಿ, ಹೆಚ್.ಆರ್. ಸುಶೀಲ, ಆಪಟ್ಟಿರ ವಿಠಲ ನಾಚಯ್ಯ, ಕೆ.ವಿ.ಸುಮಿತ್ರ, ಎಂ.ಪಿ. ಮೀನಾ, ಕೆ.ಕೆ. ಶಭರೀಶ್, ಸಿ.ಜೆ. ವಿನೋದ್ ಕುಮಾರ್, ಟಿ.ಸಿ.ನಾರಾಯಣ,ಕೆ.ಕೆ. ಸುಮಿತ್ರಾ, ಸಿ.ಎಸ್.ಸಿದ್ದಪ್ಪ, ಚೆಪ್ಪುಡಿರ ಕೆ. ಪ್ರದೀಪ್ ಪೂವಯ್ಯ, ಪಿ. ಮುತ್ತಮ್ಮ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ನಾಗರಿಕರು, ಸಂಘ ಸಂಸ್ಥೆ ಪ್ರಮುಖರು ಗ್ರಾಮಸ್ಥರು. ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಟಿ.ಸುರೇಶ್ ಸ್ವಾಗತಿಸಿ, ವಂದಿಸಿದರು.