ಕಣಿವೆ, ಫೆ. ೯: ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾವೇರಿ ನದಿ ದಂಡೆಯ ತ್ಯಾಜ್ಯ ಪ್ರದೇಶಕ್ಕೆ ಸ್ಥಳೀಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
‘ಶಕ್ತಿ’ಯಲ್ಲಿ ‘ಕಸದ ತೊಟ್ಟಿಯಂತಾಗಿರುವ ಕೂಡ್ಲೂರು ಕೈಗಾರಿಕಾ ಪ್ರದೇಶ - ಪಂಚಾಯಿತಿ ಆಡಳಿತ ನಿರಾಸಕ್ತಿ' ಎಂಬ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ‘ಶಕ್ತಿ’ಯೊಂದಿಗೆ ಮಾತನಾಡಿ, ನಾವು ಪಂಚಾಯಿತಿ ವತಿಯಿಂದ ಕೈಗಾರಿಕಾ ಬಡಾವಣೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸಿದ್ಧರಿದ್ದೇವೆ. ಆದರೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಇಲ್ಲಿನ ಕೈಗಾರಿಕಾ ಘಟಕಗಳಿಂದ ತೆರಿಗೆಯನ್ನು ಸಂಗ್ರಹ ಮಾಡುತ್ತಿದ್ದು, ಇಲ್ಲಿನ ಉದ್ಯಮಿಗಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ಪಂಚಾಯಿತಿ ವತಿಯಿಂದ ತೆರಿಗೆ ಸಂಗ್ರಹ ಮಾಡುವ ಮೂಲಕ ಇಲ್ಲಿನ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು.
ಆದರೆ ಇತ್ತೀಚೆಗೆ ಇಲಾಖೆಯ ನಿಯಮಗಳು ಬದಲಾದ ಪರಿಣಾಮ ಪಂಚಾಯಿತಿಯಿAದ ತೆರಿಗೆ ಸಂಗ್ರಹಿಸುತ್ತಿಲ್ಲ. ಹಾಗಾಗಿ ಯಾವುದೇ ಅಭಿವೃದ್ಧಿಗೂ ಒತ್ತು ನೀಡುತ್ತಿಲ್ಲ. ಗ್ರಾಮ ಪಂಚಾಯಿತಿ ವತಿಯಿಂದ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಿಗೆ ಅನುಕೂಲವಾಗಲು ಫಿಲ್ಟರ್ ವಾಟರ್ ಘಟಕ ತೆರೆಯಲು ಮುಂದಾದ ಸಂದರ್ಭ ಕೈಗಾರಿಕಾ ಇಲಾಖೆ ವಿರೋಧ ವ್ಯಕ್ತಪಡಿಸಿತ್ತು. ನಾವು ಯಾವುದೇ ಮೂಲಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಿದರೂ ಕೂಡ ಕೈಗಾರಿಕಾ ಇಲಾಖೆ ಸಹಕರಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇಲ್ಲಿನ ಕೈಗಾರಿಕೋದ್ಯಮಿಗಳ ಸಹಕಾರ ಪಡೆದು ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಭಾಸ್ಕರ್ ನಾಯಕ್ ಹೇಳಿದರು.
ಕೂಡಲೇ ಕೈಗಾರಿಕಾ ಇಲಾಖೆ ಅಧಿಕಾರಿಗಳು ಇಲ್ಲಿನ ಕಾವೇರಿ ನದಿ ದಂಡೆಯ ರಸ್ತೆಯನ್ನು ಪರಿಶೀಲಿಸಬೇಕು. ಇಲ್ಲಿ ಸಂಗ್ರಹವಾಗಿರುವ ಲೋಡುಗಟ್ಟಲೆ ಕಸದ ತ್ಯಾಜ್ಯವನ್ನು ಬೇರೆಡೆಗೆ ಸ್ಥಳಾಂತರಗೊಳಿಸಿ ತ್ಯಾಜ್ಯ - ಕಲುಷಿತ ನೀರು ನೇರವಾಗಿ ನದಿಗೆ ಸೇರದಂತೆ ಕ್ರಮ ಕೈಗೊಳ್ಳಬೇಕೆಂದು ಭಾಸ್ಕರ ನಾಯಕ್ ಕೋರಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್, ಅಭಿಯಂತರ ಕಾರ್ತಿಕ್ ಇದ್ದರು.