ಮಡಿಕೇರಿ, ಫೆ. ೮: ಕಾರ್ಮಿಕ ಕಾನೂನು ರದ್ದತಿ ಸೇರಿದಂತೆ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ವತಿಯಿಂದ ತಾ. ೧೨ ರಂದು ಮಡಿಕೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಭರತ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪ ಹೊಸ ಕಾರ್ಮಿಕ ಕಾನೂನು ಹಿಂಪಡೆಯಬೇಕು. ಜಿ ರಾಮ್ ಜಿ, ವಿಮಾ ತಿದ್ದುಪಡಿ ಕಾಯಿದೆ, ಶಾಂತಿ ಕಾಯಿದೆ ರದ್ದುಗೊಳಿಸಬೇಕು, ವಿದ್ಯುಚ್ಛಕ್ತಿ ತಿದ್ದುಪಡಿ, ಬೀಜ ಮಸೂದೆ, ಭೂ ಸ್ವಾಧೀನ ಕಾಯಿದೆ ಹಿಂಪಡೆಯಬೇಕು, ಕರ್ನಾಟಕ ಸರಕಾರ ಕಾರ್ಮಿಕ ಸಂಹಿತೆಗಳಿಗೆ ಸೇವಾ ನಿಯಮಾವಳಿ ರಚಿಸಬಾರದು, ಜನ ವಿರೋಧಿ ಮಸೂದೆ ವಿರೋಧಿಸಬೇಕೆಂದು ಒತ್ತಾಯಿಸಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ರಾಷ್ಟçವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ತಾ. ೧೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಹಳೆಯ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಲಾಗುವುದು ಎಂದರು.

ಕಾರ್ಮಿಕ ಕಾನೂನನ್ನು ಬೇಕಾಬಿಟ್ಟಿ ರಚಿಸಿಲ್ಲ. ಶ್ರಮಿಕರ ಹಿತಾಸಕ್ತಿಗೆ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಾ ಉಳ್ಳವರ ಪರ ಕಾಯಿದೆಗಳನ್ನು ರೂಪಿಸುತ್ತಿದೆ. ದುಡಿಯುವ ಸಮಯವನ್ನು ಹೆಚ್ಚಳ ಮಾಡಲಾಗಿದೆ. ಕನಿಷ್ಟ ವೇತನದ ಬಗ್ಗೆ ಪ್ರಸ್ತಾಪವಿಲ್ಲ. ಸೇವಾ ಭದ್ರತೆಯೂ ಹೊಸ ಕಾಯಿದೆಯಿಂದ ಸಿಗುವುದಿಲ್ಲ ಎಂದು ದೂರಿದ ಅವರು, ಈ ನೀತಿಯನ್ನು ಜಾರಿ ಮಾಡದಂತೆ ಆಗ್ರಹಿಸಿದರು.

ರೈತ ಮುಖಂಡ ನೆರವಂಡ ಉಮೇಶ್ ಮಾತನಾಡಿ, ೨೦೦೫ರಲ್ಲಿ ಜಾರಿಗೆ ಬಂದ ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿದ್ದಲ್ಲದೆ ಅವೈಜ್ಞಾನಿಕವಾಗಿ ಹೊಸ ನಿಯಮವನ್ನು ರೂಪಿಸಲಾಗಿದೆ. ಯೋಜನೆಯಲ್ಲಿ ಅಕ್ರಮಗಳು ನಡೆದಿದ್ದಲ್ಲಿ ತನಿಖೆ ನಡೆಸಲು ಅವಕಾಶವಿತ್ತು. ಅದನ್ನು ಮಾಡುವುದು ಬಿಟ್ಟು ಯೋಜನೆ ರೂಪುರೇಷೆಯನ್ನು ಬದಲಿಸಲಾಗಿದೆ. ಶೇ ೩ಕ್ಕಿಂತ ಕಡಿಮೆ ಪ್ರಮಾಣದ ಅವ್ಯವಹಾರ ಮನರೇಗಾದಲ್ಲಿ ನಡೆದಿದ್ದು, ಅದನ್ನು ತಪ್ಪಿಸಬಹುದಾಗಿತ್ತು. ಕೇಂದ್ರ ಸರಕಾರ ಏಕಪಕ್ಷೀಯ ನಿರ್ಣಯ ಕೈಗೊಳ್ಳುತ್ತದೆ ಎಂದು ದೂರಿದರು.

ಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಸಿಐಟಿಯು ಜಿಲ್ಲಾಧ್ಯಕ್ಷ ಎ.ಸಿ. ಸಾವು, ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಹಾಜರಿದ್ದರು.