ಸೋಮವಾರಪೇಟೆ, ಫೆ. ೮: ಕನ್ನಡ ಭಾಷೆ, ಸಾಹಿತ್ಯ, ಕನ್ನಡಿಗರ ಉದ್ಯೋಗ, ಶಿಕ್ಷಣ ಸೇರಿದಂತೆ ಕನ್ನಡಿಗರ ಪಾಲಿಗೆ ಆದ್ಯತೆಯಾಗಿರುವ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-೨೦೨೨ನ್ನು ಯಥಾವತ್ ಜಾರಿಗೆ ತರುವ ಕೆಲಸ ಆಗಬೇಕು ಎಂದು ಸೋಮವಾರಪೇಟೆ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು, ಹಿರಿಯ ಸಾಹಿತಿಯೂ ಆಗಿರುವ ಜಲಜಾ ಶೇಖರ್ ಅಭಿಮತ ವ್ಯಕ್ತಪಡಿಸಿದ್ದಾರೆ.
ಐಗೂರಿನಲ್ಲಿ ತಾ. ೯ ರಂದು (ಇಂದು) ನಡೆಯಲಿರುವ ಸೋಮವಾರಪೇಟೆ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಲಜಾ ಅವರು ‘ಶಕ್ತಿ’ ಯೊಂದಿಗೆ ಮಾತನಾಡಿದ್ದು, ಪ್ರಮುಖವಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆಯ ಅನುಷ್ಠಾನ ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ಈ ಕಾಯ್ದೆಯ ಅನುಷ್ಠಾನದಿಂದ ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ. ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರಿಗೆ ಅವಕಾಶ ಹೆಚ್ಚಾಗಲಿದೆ. ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆಗೂ ಪೂರಕವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಕಳೆದ ೨೫ ವರ್ಷಗಳಿಂದಲೂ ಬರವಣಿಗೆಯ ಹವ್ಯಾಸ ರೂಢಿಸಿಕೊಂಡಿರುವ ಜಲಜಾ ಶೇಖರ್ ಅವರು, ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರವೂ ವಿವಿಧ ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಇದೀಗ ಕೊಡಗು ಜಿಲ್ಲಾ ಹಾಗೂ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನೇತೃತ್ವದಲ್ಲಿ, ಐಗೂರು ಕಸಾಪ ಘಟಕದ ಆಶ್ರಯದಲ್ಲಿ ನಡೆಯುವ ೯ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ತಮ್ಮ ಸಾಹಿತ್ಯ ಸೇವೆಗೆ ಸಂದ ಗೌರವ ಎಂಬ ಧನ್ಯತಾ ಭಾವ ಜಲಜಾ ಅವರದ್ದು.
ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಇದರ ಜೊತೆಗೆ ಸಾಹಿತ್ಯ ಕ್ಷೇತ್ರದ ಸೇವೆಯ ಜವಾಬ್ದಾರಿಯೂ ಹೆಚ್ಚಿದೆ ಎಂದು ತಿಳಿಸಿರುವ ಇವರು, ಸಮ್ಮೇಳನ ಎಂದರೆ ಸಾಹಿತ್ಯದ ಜಾತ್ರೆ, ಸಾಹಿತ್ಯದ ಮೆರವಣಿಗೆ, ಕನ್ನಡದ ಆರಾಧನೆ, ಕನ್ನಡ ಮನಸ್ಸುಗಳ ಸಮ್ಮಿಲನಕ್ಕೆ ವೇದಿಕೆ ಎಂದು ತಿಳಿಸಿದ್ದಾರೆ.
‘ಈ ಬಾರಿ ಸಾಹಿತ್ಯದ ಸವಿಯನ್ನು ಉಣಬಡಿಸುವ ಔತಣಕೂಟ, ನಾಡ ದೇವಿಯ ತೇರು ಎಳೆಯುವ ಅವಕಾಶ ಐಗೂರಿನವರಿಗೆ ಸಿಕ್ಕಿದೆ. ಹಲವು ಸಂಸ್ಕೃತಿಗಳು ನೆಲೆಯಾಗಿರುವ ಐಗೂರಿನ ಸಮ್ಮೇಳನದಲ್ಲಿ ನಾನೂ ಕೂಡ ಭಾಗಿಯಾಗುತ್ತಿದ್ದೇನೆ ಎಂಬ ಖುಷಿ ಹೆಚ್ಚಿದೆ. ಈ ಹಿಂದಿನಿAದಲೂ ಹಲವಷ್ಟು ಸಮ್ಮೇಳನಗಳಲ್ಲಿ ತಾನು ಭಾಗಿಯಾಗಿದ್ದು, ವಿವಿಧ ವಿಚಾರಗಳನ್ನು ಮಂಡಿಸಿದ್ದೇನೆ.
ಈ ಬಾರಿ ನಾನೇ ಸಮ್ಮೇಳನದ ಅಧ್ಯಕ್ಷೆಯಾಗಿರುವುದು ಜೀವನದ ಸಾರ್ಥಕ ಕ್ಷಣಗಳಲ್ಲಿ ಒಂದು’ ಎಂಬುದು ಜಲಜಾ ಶೇಖರ್ ಅವರ ನುಡಿ.
ಸಾಹಿತ್ಯದ ಮೂಲಕ ಸಮಾಜವನ್ನು ಜಾಗೃತಗೊಳಿಸುವ ದೃಷ್ಟಿಕೋನವನ್ನು ಸಮ್ಮೇಳನ ಹೊಂದಿದೆ. ಕನ್ನಡದ ಸಾಹಿತ್ಯವು ಕೇವಲ ಕಾವ್ಯ, ಕಾದಂಬರಿಗಳಿಗೆ ಸೀಮಿತವಾಗದೇ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಿಗೂ ವಿಸ್ತಾರಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಐಗೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಎಲ್ಲೆಡೆಯಿಂದ ಕನ್ನಡಿಗರು ಭಾಗಿಯಾಗಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕನ್ನಡ ನಾಡು, ನೆಲ ಜಲದ ರಕ್ಷಣೆಯಾಗಬೇಕು. ಕನ್ನಡಿಗರು ಕನ್ನಡಿಗರಾಗಿ ಉಳಿಯಬೇಕಾದರೆ ಕನ್ನಡತನ ಜಾಗೃತವಿರಬೇಕು. ಈ ಕಾರ್ಯದಲ್ಲಿ ಪತ್ರಿಕೆಗಳು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿವೆ. ಕೊಡಗಿನ ಶಕ್ತಿ ದಿನಪತ್ರಿಕೆ ತನ್ನ ಬರವಣಿಗೆಗೆ ಹೆಚ್ಚು ಪ್ರೋತ್ಸಾಹ ನೀಡಿದೆ ಎಂದು ಸ್ಮರಿಸಿರುವ ಸರ್ವಾಧ್ಯಕ್ಷೆ ಜಲಜಾ ಶೇಖರ್, ಸಮ್ಮೇಳನದಂತಹ ಜಾಗೃತಿ ಕಾರ್ಯಕ್ರಮದಲ್ಲಿ ಕನ್ನಡಿಗರೆಲ್ಲರೂ ಭಾಗಿಯಾಗಬೇಕೆಂದು ‘ಶಕ್ತಿ’ಮೂಲಕ ಸ್ವಾಗತಿಸಿದ್ದಾರೆ. - ವಿಜಯ್ ಹಾನಗಲ್
ಸಮ್ಮೇಳನದ ಸರ್ವಾಧ್ಯಕ್ಷೆ ಜಲಜಾ ಶೇಖರ್ ಪರಿಚಯ
ವಿದ್ಯಾರ್ಥಿ ಜೀವನದಿಂದಲೂ ನಾಯಕತ್ವದ ಗುಣಗಳನ್ನು ಹೊಂದಿದ್ದ ಜಲಜಾ ಶೇಖರ್ ಅವರು, ಶಾಲಾ ಕಾಲೇಜುಗಳಲ್ಲಿ, ಬಿ.ಇಡಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಇಂಟರಾಕ್ಟ್ ಕ್ಲಬ್‌ನ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದವರು. ಸೋಮವಾರಪೇಟೆ ಪಟ್ಟಣದ ಬಸವೇಶ್ವರ ರಸ್ತೆಯ ನಿವಾಸಿಯಾಗಿರುವ ಇವರು ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು. ಎಂ.ಎ. ಬಿ.ಇಡಿ ವ್ಯಾಸಂಗ ಮಾಡಿರುವ ಜಲಜಾ ಅವರ ಪತಿ ಶೇಖರ್ ಅವರೂ ಕೂಡ ನಿವೃತ್ತ ಮುಖ್ಯೋಪಾಧ್ಯಾಯರು. ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವವರು. ಜಲಜಾ ಶೇಖರ್ ಅವರು ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಜ್ಞಾನಸಿಂಧು ಪ್ರಶಸ್ತಿ, ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕಿ ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸೋಮವಾರಪೇಟೆ ಮಹಿಳಾ ಸಹಕಾರ ಸಂಘದಲ್ಲಿ ನಿರ್ದೇಶಕಿ, ಕಾರ್ಯದರ್ಶಿ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನಿರ್ದೇಶಕಿಯಾಗಿದ್ದಾರೆ. ಇದರೊಂದಿಗೆ ಮಹಿಳೆಯರೇ ಸೇರಿಕೊಂಡು ಸೋಮವಾರಪೇಟೆಯಲ್ಲಿ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಿದ್ದು, ಇದರಲ್ಲಿ ಸ್ಥಾಪಕ ನಿರ್ದೇಶಕಿ, ನಂತರ ಉಪಾಧ್ಯಕ್ಷೆ, ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು, ಹಾಲಿ ನಿರ್ದೇಶಕಿಯಾಗಿದ್ದಾರೆ. ಸೋಮವಾರಪೇಟೆ ತಾಲೂಕು ಸಹಕಾರ ಒಕ್ಕೂಟ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕಿಯೂ ಆಗಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ, ಸೋಮವಾರಪೇಟೆ ವೀರಶೈವ ಸಮಾಜದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಸೋಮವಾರಪೇಟೆ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸಂದರ್ಭ ‘ವಿಚಾರದೆಡೆಗೆ’ ಎಂಬ ವೈಚಾರಿಕ ಲೇಖನಗಳ ಪುಸ್ತಕವನ್ನು ಹೊರತರುವ ಮೂಲಕ ಸಾಹಿತ್ಯ ಕ್ಷೇತ್ರದ ಪ್ರಥಮ ಹೆಜ್ಜೆ ಇಟ್ಟ ಇವರು, ನಂತರ ನೆಲಮುಗಿಲು-ಕವನ ಸಂಕಲನ, ವಿಲೋಕನ-ವೈಚಾರಿಕ ಲೇಖನ, ಪ್ರತೀಕ್ಷಾ-ಕವನ ಸಂಕಲನ, ಅಗ್ನಿಕುಂಡ-ಕಥಾ ಸಂಕಲನ, ಕನ್ನಡಿಯ ಬಿಂಬ, ದೂರ ತೀರ ಯಾನ-ವಿದೇಶ ಪ್ರವಾಸದ ಅನುಭವ ಕಥನ ಬಿಡುಗಡೆಯಾಗಿವೆ. ೮ನೇ ಪುಸ್ತಕವಾಗಿ ‘ನಿರುತ್ತರ’ ಕಥಾ ಸಂಕಲನ ನಾಳೆ ನಡೆಯುವ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿದೆ. ಸಮಾಜಮುಖಿ ಹಾಗೂ ಸಾಹಿತ್ಯ ಸೇವೆಗೆ ಪತಿ ಜೆ.ಸಿ. ಶೇಖರ್ ಅವರ ಸಂಪೂರ್ಣ ಸಹಕಾರವಿದ್ದು, ಸದಾ ಬೆಂಬಲ ನೀಡುತ್ತಿದ್ದಾರೆ. ಜಲಜಾ ಶೇಖರ್ ಅವರ ಪ್ರಥಮ ಪುತ್ರ ಡಾ. ಕಿರಣ್ ಶೇಖರ್, ದ್ವಿತೀಯ ಪುತ್ರ ಕಿಶನ್ ಶೇಖರ್ ಆಸ್ಟೆçÃಲಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಈರ್ವರು ಸೊಸೆ, ನಾಲ್ವರು ಮೊಮ್ಮಕ್ಕಳನ್ನು ಹೊಂದಿರುವ ಈ ಕುಟುಂಬ ಆಸ್ಟೆçÃಲಿಯಾದಲ್ಲಿ ನೆಲೆಸಿದ್ದರೂ ಸೋಮವಾರಪೇಟೆಯ ನಂಟನ್ನು ಉಳಿಸಿಕೊಂಡಿದೆ.