ಗೋಣಿಕೊಪ್ಪಲು, ಫೆ. ೭: ಕೊಡಗಿನಾದ್ಯಂತ ೨ ಲೀಟರ್ ಒಳಗಿನ ನೀರಿನ ಬಾಟಲ್‌ಗಳನ್ನು ನಿಷೇಧಿಸಲು, ಏಕಬಳಕೆ ಪ್ಲಾಸ್ಟಿಕ್ ಬಳಸಲು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ತ್ರೆöÊಮಾಸಿಕ ಸಭೆಯಲ್ಲಿ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು. ಇತ್ತೀಚಿನ ದಿನಗಳಲ್ಲಿ ಕೊಡಗಿನಾದ್ಯಂತ ಪ್ಲಾಸ್ಟಿಕ್ ಬಾಟಲಿಗಳು ಹೆಚ್ಚಾಗಿ ಎಲ್ಲೆಂದರಲ್ಲಿ ಎಸೆಯಲ್ಪಡುವುದರಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಹಿನ್ನಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಭವನದಲ್ಲಿ ಜಿಲ್ಲಾ ಚೇಂಬರ್‌ನ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಕಳೆದ ಸಭೆಯ ವರದಿ ವಾಚಿಸಿದರು. ಖಜಾಂಚಿ ಪೊನ್ನಿಮಾಡ ಎಸ್. ಸುರೇಶ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ವಿವಿಧ ಸ್ಥಾನೀಯ ಸಮಿತಿಯ ಅಧ್ಯಕ್ಷರುಗಳು ಹಾಗೂ ಪ್ರತಿನಿಧಿಗಳು ಈವರೆಗಿನ ಕಾರ್ಯ ಚಟುವಟಿಕೆಗಳ ವಿವರ ನೀಡಿದರು. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯಿತ್ತರು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಸ್ಥಾನೀಯ ಸಮಿತಿಯನ್ನು ಉತ್ತಮವಾಗಿ ಸಂಘಟಿಸಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಹಾಗೂ ಜಿಲ್ಲಾ ಚೇಂಬರ್‌ನ ಉಪಾಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಅವರನ್ನು ಜಿಲ್ಲಾ ಚೇಂಬರ್ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಹಿರಿಯ ವರ್ತಕರಾದ ದಿ. ಬಾಬುಚಂದ್ರ ಉಳ್ಳಾಗಡ್ಡಿ, ದಿ. ಪಿ.ಕೆ. ವಿಜಯನ್ ಹಾಗೂ ದಿ. ವಿ. ಮನೋಹರ್ ಅವರುಗಳ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ನವೀನ್ ಅಂಬೆಕಲ್, ಬಿ.ಟಿ. ತಿಮ್ಮಶೆಟ್ಟಿ, ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿಗಳಾದ ಟಿ.ಆರ್. ಶರವಣ ಕುಮಾರ್, ಬಿ.ಆರ್. ಪ್ರಮೋದ್ ನಿರ್ದೇಶಕರು ಹಾಗೂ ಸ್ಥಾನೀಯ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.