ಕಣಿವೆ, ಫೆ. ೭: ಆಹಾರ ಅರಸಿ ನಾಡಿಗೆ ಬಂದ ಕಾಡಾನೆಯೊಂದು ಬೇಲಿ ದಾಟುತ್ತಿದ್ದಾಗ ವಿದ್ಯುತ್ ತಂತಿಗೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ ಘಟನೆ ಕುಶಾಲನಗರ ಸಮೀಪ ಕಾವೇರಿ ನದಿ ದಂಡೆಯ ದೊಡ್ಡಹರವೆ ಎಂಬಲ್ಲಿ ಸಂಭವಿಸಿದೆ. ಗ್ರಾಮದ ಮೊಖ್ತಾರ್ ಎಂಬವರಿಗೆ ಸೇರಿದ ಹೊಲದಲ್ಲಿ ಶಿವಣ್ಣ ಎಂಬವರು ಜೋಳ ಬೆಳೆದಿದ್ದರು. ಜೋಳದ ಫಸಲು ರಕ್ಷಣೆಗೆ ಇವರಿಬ್ಬರು ತಂತಿಯಿAದ ಬೇಲಿ ನಿರ್ಮಿಸಿ ವಿದ್ಯುತ್ ಹರಿಸಿದ್ದರು. ಶುಕ್ರವಾರ ರಾತ್ರಿ ಕಾವೇರಿ ನದಿ ದಾಟಿ ಧಾವಿಸಿ ಬಂದ ಕಾಡಾನೆ ಕಾಲಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಅದು ಸ್ಥಳದಲ್ಲೇ ಅಸು ನೀಗಿದೆ.

ಸ್ಥಳಕ್ಕೆ ಕೊಪ್ಪ ವಿಭಾಗದ ಚೆಸ್ಕಾಂ ಸಿಬ್ಬಂದಿ ಹಾಗೂ ಹುಣಸೂರು ವನ್ಯ ಜೀವಿ ವಿಭಾಗದ ಅರಣ್ಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಶಿವಣ್ಣ ಹಾಗೂ ಮೊಖ್ತಾರ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.