*ಗೋಣಿಕೊಪ್ಪ, ಫೆ. ೭: ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಕಸವಿಲೇವಾರಿ, ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಕ್ರೀಡಾ ಪರಿಕರಗಳ ವ್ಯವಸ್ಥೆಯನ್ನು ಒದಗಿಸಿ ಕೊಡುವಂತೆ ಸೇರಿದಂತೆ ಮಕ್ಕಳು ತಮಗೆ ಶಾಲೆಯಲ್ಲಿ ಬೇಕಾದ ಬೇಡಿಕೆಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದರು.

ಗೋಣಿಕೊಪ್ಪ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿ ಪ್ರೇರಣಾ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.

ಶಾಲೆ ಬಿಟ್ಟ ನಂತರ ಶಾಲೆಯ ಆವರಣದೊಳಗೆ ಪುಂಡಪೋಕರಿಗಳು ಬರುತ್ತಿರುವುದರಿಂದ ಶಾಲೆಯ ಆವರಣ ಹದಗೆಡುತ್ತಿದೆ. ಶಾಲೆಯ ವಾತಾವರಣವನ್ನು ಶುದ್ಧವಾಗಿ ಮತ್ತು ಭದ್ರವಾಗಿಟ್ಟುಕೊಳ್ಳಲು ಸಿ.ಸಿ ಕ್ಯಾಮರಗಳನ್ನು ಅಳವಡಿಸಿಕೊಡಬೇಕೆಂದು ಪ್ರೇರಣ ಕೋರಿದರು.

ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಿರೀಕ್ಷಾ ಮಾತನಾಡಿ, ಶಾಲೆಯ ಹಿಂಬದಿಯಲ್ಲಿ ಕಾಂಪೌAಡ್ ಅಳವಡಿಸಿ ಗೇಟ್ ಭದ್ರಪಡಿಸಿ ಕೊಡುವಂತೆ ಬೇಡಿಕೆ ಸಲ್ಲಿಸಿದರು.

ವಿದ್ಯಾರ್ಥಿನಿ ಮಮತಾ, ಶಾಲೆಯ ಕೊಠಡಿಗಳಲ್ಲಿ ಕಬೋರ್ಡ್ ಅಳವಡಿಸಿದರೆ ಪುಸ್ತಕಗಳನ್ನು ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಭೆಗೆ ತಿಳಿಸಿದರು. ವಿದ್ಯಾರ್ಥಿನಿ ರಂಜಿತಾ, ಶಾಲೆಯಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಪಂಚಾಯಿತಿ ವಿಶೇಷ ಗಮನ ಹರಿಸಬೇಕು ಎಂದು ಗಮನ ಸೆಳೆದರು.

ವಿದ್ಯಾರ್ಥಿ ಜಗದೀಶ್, ಹೆಚ್ಚುವರಿ ಶೌಚಾಲಯ ಕಟ್ಟಡ ನಿರ್ಮಿಸಿ ಕೊಡುವಂತೆ ಬೇಡಿಕೆ ಮುಂದಿಟ್ಟರು. ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿ ಗೋಕುಲ ಎಂ.ಎಸ್ ಮಾತನಾಡಿ, ಶೌಚಾಲಯ ನಿರ್ಮಾಣಕ್ಕೆ ಕಳೆದ ಬಾರಿ ಮನವಿ ಸಲ್ಲಿಸಿದರು ಪ್ರಗತಿ ಕಾಣಲಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ವಿದ್ಯಾರ್ಥಿ ಸುನಿಲ್, ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಾಲಿಬಾಲ್ ನೆಟ್‌ಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು. ವಿದ್ಯಾರ್ಥಿ ಕುಶಿ, ಶಾಲೆಯಲ್ಲಿ ಒಡೆದು ಹೋದ ಹೆಂಚುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಕ್ಕಳ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ಪಂಚಾಯಿತಿಯಲ್ಲಿ ಶಾಲಾ ಅಭಿವೃದ್ಧಿಗೆ ಅನುದಾನವನ್ನು ಮೀಸಲಿರಿಸಿ ಸೌಕರ್ಯಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಖ್ಯಶಿಕ್ಷಕ ಹೆಚ್.ಕೆ. ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ಶಾಲೆಯ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಕ್ರಮಕೈಗೊಂಡಿದೆ ಎಂದು ಹೇಳಿದರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುಳಾ ಎಂ., ಸದಸ್ಯರುಗಳಾದ ಚೈತ್ರ ಬಿ. ಚೇತನ್, ಕೊಣಿಯಂಡ ಬೋಜಮ್ಮ, ಸಫೂರಬಾನು, ಗ್ರಾ.ಪಂ. ಸಿಬ್ಬಂದಿಗಳು, ಪ್ರೌಢ ಶಾಲೆಯ ಶಿಕ್ಷಕರು ಇದ್ದರು.