ಹೆಚ್.ಜೆ. ರಾಕೇಶ್

ಮಡಿಕೇರಿ, ಫೆ. ೬: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಇಲ್ಲದ ಏಕೈಕ ಜಿಲ್ಲಾ ಕೇಂದ್ರವಾಗಿದ್ದ ಮಡಿಕೇರಿಯಲ್ಲಿ ಕೊನೆಗೂ ಪ್ರತಿಮೆ ತಲೆ ಎತ್ತುವ ಕಾಲ ಕೂಡಿಬಂದAತಾಗಿದೆ. ೩ ದಶಕಗಳಿಗೂ ಹೆಚ್ಚು ಕಾಲದ ಬೇಡಿಕೆ ಇದೀಗ ಈಡೇರಿದ್ದು, ನಿರ್ಮಾಣ ಕಾರ್ಯವೂ ಆರಂಭಗೊAಡಿದೆ. ಮುಂದಿನ ಅಂಬೇಡ್ಕರ್ ಜಯಂತಿ ವೇಳೆಗೆ ಅಂದರೆ ಏ. ೧೪ ರಂದು ಪ್ರತಿಮೆಯನ್ನು ಉದ್ಘಾಟಿಸುವ ಗುರಿಯನ್ನು ಹೊಂದಲಾಗಿದೆ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ದೇಶ ಸೇರಿದಂತೆ ವಿದೇಶಗಳಲ್ಲೂ ಕಂಡುಬರುತ್ತದೆ. ಅವರ ಚಿಂತನೆ, ಸಾಧನೆ, ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿಮೆ ನಿರ್ಮಾಣವಾಗುತ್ತದೆ. ಆದರೆ, ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಾತ್ರ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕನಸು ದಶಕಗಳಿಂದಲೂ ಕನಸಾಗಿಯೇ ಉಳಿದು ಕೊಂಡಿತ್ತು.

ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದೇಶದ ಮಹಾನ್ ನಾಯಕ ಅಂಬೇಡ್ಕರ್ ಪ್ರತಿಮೆ, ಪುತ್ಥಳಿಗಳು ಕಾಣಸಿಗುತ್ತವೆ. ಆದರೆ, ಕೊಡಗಿನ ಸೋಮವಾರ ಪೇಟೆಯಲ್ಲಿ ಹೊರತುಪಡಿಸಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಎಲ್ಲಿಯೂ ಪ್ರತಿಮೆ ಇಲ್ಲದಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಮಡಿಕೇರಿ ಯಲ್ಲಿ ಪ್ರತಿಮೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ದಲಿತ ಸಂಘಟನೆಗಳು ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಭೆ-ಸಮಾರಂಭಕ್ಕೆ ಬರುವ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡುತ್ತ ಬರುತ್ತಿದ್ದರೂ ಫಲಪ್ರದವಾಗಿರಲಿಲ್ಲ.

ಕಳೆದ ವರ್ಷ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಯೋಜನೆ ಕೈಗೆತ್ತಿಕೊಳ್ಳಲಾಯಿತು. ಇದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಇರುವುದರಿಂದ ಜನಪ್ರತಿನಿಧಿಗಳ ಒಮ್ಮತ ಬೇಕಾಗಿತ್ತು. ನಗರಸಭೆ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆಯ ಠರಾವು ಮಂಡಿಸಿ ಸದಸ್ಯರು ಒಮ್ಮತ ಸೂಚಿಸಿ ನಿರ್ಣಯಿಸಿದ ಹಿನ್ನೆಲೆ ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತು ನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿಯ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಸಮೀಪದ ಉದ್ಯಾನವನದಲ್ಲಿ ಜಾಗ ಗುರುತು ಮಾಡಿ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅನಂತರ ಜಾಗದ ಕುರಿತು ಕೆಲ ಆಕ್ಷೇಪಣೆಗಳು ಬಂದಿದ್ದವು. ಸದಸ್ಯರು ಬಂದಿರುವ ಆಕ್ಷೇಪಣೆಗಳನ್ನು ತಿರಸ್ಕರಿಸಿದ ಹಿನ್ನೆಲೆ ಪ್ರತಿಮೆ ನಿರ್ಮಾಣಕ್ಕೆ ಇದೇ ಜಾಗ ಅಂತಿಮವಾಗಿತ್ತು.

ಪ್ರತಿಮೆ ನಿರ್ಮಾಣಕ್ಕಾಗಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಮೊದಲು ನಗರದ ಅಂಬೇಡ್ಕರ್ ಭವನ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಎದುರು ಪ್ರತಿಮೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಕಾರಣಾಂತರಗಳಿAದ ಈ ಜಾಗವನ್ನು ತಿರಸ್ಕರಿಸಿ ಇದೀಗ ಆಯ್ಕೆಗೊಂಡಿರುವ ಜಾಗವನ್ನು ಅಂತಿಮಗೊಳಿಸಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಸಂಬAಧಪಟ್ಟ ಇಲಾಖೆಯಿಂದ ಅನುಮೋದನೆಯನ್ನು ಪಡೆಯಲಾಗಿದ್ದು, ನಗರಸಭೆ ನಿರ್ಮಾಣದ ಮೇಲುಸ್ತುವಾರಿಯನ್ನು ಹೊತ್ತು ಕೊಂಡಿದೆ.

ಕಂಚಿನ ಪ್ರತಿಮೆ

ಮಡಿಕೇರಿಯ ಫೀ.ಮಾ. ಕಾರ್ಯಪ್ಪ ವೃತ್ತದ (ಸುದರ್ಶನ ವೃತ್ತ) ಬಳಿಯಲ್ಲಿರುವ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಾಣವಾಗಲಿದ್ದು, ಇದಕ್ಕಾಗಿ ರೂ. ೪೪ ಲಕ್ಷ ವೆಚ್ಚ ತಗುಲಲಿದೆ.

ಪ್ರಾಥಮಿಕವಾಗಿ ರೂ. ೨೦ ಲಕ್ಷ ಹಣವನ್ನು ನಗರಸಭೆ ಮಂಜೂರು ಮಾಡಿದ್ದು, ಇದರಲ್ಲಿ ಜಾಗದ ಅಭಿವೃದ್ಧಿಯೊಂದಿಗೆ ಆವರಣದಲ್ಲಿ ಗ್ರಿಲ್ ಅಳವಡಿಕೆ ಹಾಗೂ ಕಿರು ಉದ್ಯಾನವನ ನಿರ್ಮಾಣದೊಂದಿಗೆ ಸುಂದರೀಕರಣ ಕೆಲಸವನ್ನು ನಡೆಸಲಾಗುತ್ತಿದೆ. ಇನ್ನೂ ಕಂಚಿನ ಪ್ರತಿಮೆಗೆ ರೂ. ೨೨ ಲಕ್ಷದಷ್ಟು ವೆಚ್ಚವಾಗಲಿದೆ. ಇದನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ತಮ್ಮ ನಿಧಿಯಿಂದ ಭರಿಸಲಿದ್ದಾರೆ.

ಬೆಂಗಳೂರಿನ ಶಿಲ್ಪಿ ಕೃಷ್ಣ ನಾಯಕ್ ಎಂಬವರು ೯ ಅಡಿಯ ಪ್ರತಿಮೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಸುಮಾರು ೫ ಅಡಿಯ ಪೀಠ ನಿರ್ಮಾಣವಾಗಲಿದೆ. ಅದರ ಮೇಲ್ಭಾಗದಲ್ಲಿ ೯ ಅಡಿಯ ಪ್ರತಿಮೆ ಬರಲಿದೆ. ಒಟ್ಟಾರೆಯಾಗಿ ೧೪ ಅಡಿಯಲ್ಲಿ ಪ್ರತಿಮೆ ತಲೆಎತ್ತಲಿದೆ. ಇದರೊಂದಿಗೆ ಅಂಬೇಡ್ಕರ್ ಅವರ ಜೀವನಗಾಥೆಯನ್ನು ತಿಳಿಸುವ ನಿಟ್ಟಿನಲ್ಲಿ ಗ್ರಾನೈಟ್‌ನಲ್ಲಿ ಮಾಹಿತಿ ಫಲಕಗಳು, ಪ್ರತಿಮೆ ಹಾಗೂ ಆವರಣ ಚಂದಗಾಣಿಸಲು ಆಕರ್ಷಕ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ನಗರಸಭಾ ಸದಸ್ಯ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ