ಮಡಿಕೇರಿ, ಫೆ. ೬: ಶಿವರಾತ್ರಿ ಅಂಗವಾಗಿ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಮುಖರು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಕುಯ್ಯಮುಡಿ ಪೂರ್ಣಯ್ಯ, ತಾ. ೭ ರಿಂದ ೧೬ರ ತನಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಮಿತಿಯವರು ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆಗೆ ಶ್ರಮಿಸುತ್ತಿದ್ದಾರೆ ಎಂದರು.

ಉಪಾಧ್ಯಕ್ಷ ಕಾಯರ ಬೆಳ್ಳಿಯಪ್ಪ ಮಾತನಾಡಿ, ತಾ. ೭ ರಂದು ಬೆಳಿಗ್ಗೆ ೯.೩೦ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ ೬.೩೦ಕ್ಕೆ ಭಜನೆ ನಡೆಯಲಿದೆ. ಪ್ರತಿ ಸಂಜೆ ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ ಸಂಜೆ ೬.೩೦ ರಿಂದ ಆರಂಭವಾಗಲಿದೆ. ದಿನನಿತ್ಯ ರಾತ್ರಿ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಜರುಗಲಿದೆ. ತಾ. ೧೫ ರಂದು ಬೆಳಿಗ್ಗೆ ೯ ಕ್ಕೆ ಗ್ರಾಮದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಗ್ರಾಮದ ಜನರು ಹೊರೆಕಾಣಿಕೆಯನ್ನು ತಂದು ದೇವಾಲಯಕ್ಕೆ ಅರ್ಪಿಸಲಿದ್ದಾರೆ. ಈ ವೇಳೆ ಉದಯಗಿರಿ ಪುತ್ತೂರು ಶ್ರೀ ವಿಷ್ಣುಮೂರ್ತಿ ಭಜನಾ ತಂಡದಿAದ ಭಜನಾ ಕುಣಿತ ನಡೆಯಲಿದೆ. ಅಂದು ಸಂಜೆ ೬.೩೦ ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮ಕ್ಕೆ ರುದ್ರಾಭಿಷೇಕ, ರಾತ್ರಿ ೯.೩೦ಕ್ಕೆ ರಂಗಪೂಜೆ ನಂತರ ಕಾಸರಗೋಡಿನ ದುರ್ಗಾ ಪರಮೇಶ್ವರಿ ಮಂಡಳಿಯಿAದ ಕೊಲ್ಲೂರು ಮೂಕಾಂಬಿಕ ಕಥಾ ಪ್ರಸಂಗ ಯಕ್ಷಗಾನ ಆಯೋಜಿಸಲಾಗಿದೆ. ತಾ. ೧೬ ರಂದು ಬೆಳಿಗ್ಗೆ ೧೧ಕ್ಕೆ ಧಾರ್ಮಿಕ ಉಪನ್ಯಾಸ ಜರುಗಲಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಬಿ. ಲೋಕೇಶ್, ಖಜಾಂಚಿ ಈಶ್ವರ್, ಪದಾಧಿಕಾರಿ ರತ್ನಾಕರ್ ರೈ, ಟ್ರಸ್ಟಿ ಪಿ.ಎಂ. ದಾಮೋದಾರ್ ಹಾಜರಿದ್ದರು.