ಕುಶಾಲನಗರ, ಫೆ. ೬: ಅರಸುತನ ಮೇಲಲ್ಲ. ಅಗಸತನ ಕೀಳಲ್ಲ. ಅವೆರಡೂ ಒಂದೇ ಎಂದು ಸಾರಿದ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ ಮಡಿವಾಳ ಮಾಚಿದೇವ ವಚನಗಳನ್ನು ಸಂರಕ್ಷಿಸುವ ಮೂಲಕ ವಚನ ಸಾಹಿತ್ಯವನ್ನು ಪೋಷಿಸಿದ ಶ್ರೇಷ್ಠ ವಚನಕಾರ ಎಂದು ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಬಣ್ಣಿಸಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಲೆಯ ಸಂಯುಕ್ತ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣದಲ್ಲಿ ಶಿವ ಭಕ್ತರು ಹಾಗೂ ಶರಣರ ಬಟ್ಟೆಗಳನ್ನು ಶುಚಿ ಮಾಡುವ ಶ್ರೇಷ್ಠ ಕಾಯಕದಲ್ಲಿ ನಿರತರಾಗಿದ್ದ ಮಾಚಿದೇವರು, ದೈವಿಕ, ಐಚ್ಛಿಕ, ತಾರತಮ್ಯ ರಹಿತ, ದಾಸೋಹ ಸಹಿತ ಕಾಯಕದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡ ನೈತಿಕ ಮತ್ತು ವೈಚಾರಿಕ ಮೌಲ್ಯಗಳ ಮೂಲಕ ಅಭಿವ್ಯಕ್ತಿ ಪಡೆದ ಶ್ರೇಷ್ಠ ಶರಣರಾಗಿದ್ದರು. ಕಾಯಕ ಮತ್ತು ದಾಸೋಹಗಳೆಂಬ ಆರ್ಥಿಕ ಸಿದ್ದಾಂತಗಳನ್ನು ರೂಪಿಸಿದ ಹನ್ನೆರಡನೇ ಶತಮಾನದ ವಚನಕಾರರು ಪ್ರತಿಯೊಬ್ಬನೂ ದುಡಿದೇ ತಿನ್ನಬೇಕು. ಪ್ರತಿಯೊಬ್ಬ ಶ್ರಮಜೀವಿಯೂ ಮಾಡುವ ದುಡಿಮೆಗೆ ಬೆಲೆ ಕೊಟ್ಟು ಅವರೆಲ್ಲರ ವೃತ್ತಿಗೌರವವನ್ನು ಹೆಚ್ಚಿಸಿದವರು ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಮೆ.ನಾ.ವೆಂಕಟನಾಯಕ್ ಮಾತನಾಡಿ, ವಚನ ಸಾಹಿತ್ಯ ಯಂತ್ರಗಳ ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಟ್ಟ ವಿಜ್ಞಾನವಲ್ಲ. ಅದರ ಬುನಾದಿ ಇರುವುದೇ ಅಪ್ಪಟ ವೈಜ್ಞಾನಿಕತೆ ಮತ್ತು ವೈಚಾರಿಕತೆಯಲ್ಲಿ. ಮಾನವ ವಿರೋಧಿ ನಿಲುವುಗಳನ್ನು ಪ್ರಶ್ನಿಸಿ, ಪ್ರತಿಭಟಿಸಿ ಶರೀರವನ್ನೇ ದೇವಾಲಯವಾಗಿಸಿದ ಶ್ರೇಷ್ಠ ಸಾಹಿತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಹನ್ನೆರಡನೇ ಶತಮಾನದ ಮಹಾ ಶರಣ ಬಸವೇಶ್ವರರು ಲೋಕಕ್ಕೆ ನೀಡಿದ ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಸೂತ್ರಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅತ್ಯವಶ್ಯಕವಾಗಿ ಅಳವಡಿಸುವ ಮೂಲಕ ಸತ್ಯ, ನ್ಯಾಯ ನೀತಿಯಂತೆ ಬದುಕಲು ಕರೆ ನೀಡಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.

ಹೆಬ್ಬಾಲೆ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಕೆ.ವಿಜಯಕುಮಾರ್, ಸಾಹಿತಿ ಕವಿತಾ ಪುಟ್ಟೇಗೌಡ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ಶಿಕ್ಷಕರಾದ ಲೋಕೇಶ್, ಸುಧಾಕರ್, ಭೋಜೇಗೌಡ ಇದ್ದರು.