ಪೊನ್ನಂಪೇಟೆ, ಫೆ. ೫: ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಹಾಗೂ ಪೋಲಿಸರ ನಡುವೆ ಸಮನ್ವಯ ಸಭೆ ನಡೆಯಿತು.
ಠಾಣಾಧಿಕಾರಿ ನವೀನ್. ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊನ್ನಂಪೇಟೆ ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನಂತರ ಮಾತನಾಡಿದ ಠಾಣಾಧಿಕಾರಿ, ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಂಜಾ ವ್ಯಸನಿಗಳು ಮತ್ತು ಇತರೆ ಅಕ್ರಮ ಚಟುವಟಿಕೆಗಳಲ್ಲಿ ಯಾರಾದರೂ ಭಾಗಿಯಾಗಿರುವುದು ತಿಳಿದು ಬಂದರೆ ಕೂಡಲೇ ತಮಗೆ ಮಾಹಿತಿ ನೀಡುವಂತೆ ಆಟೋ ಚಾಲಕರಲ್ಲಿ ಮನವಿ ಮಾಡಿದರು. ಸೂಕ್ತ ದಾಖಲಾತಿಗಳನ್ನು ಇಟ್ಟುಕೊಂಡು ಆಟೋ ಚಾಲನೆ ಮಾಡಬೇಕು. ಕಡ್ಡಾಯವಾಗಿ ಸಮವಸ್ತç ಧರಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ಪೊನ್ನಂಪೇಟೆ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ದಿನೇ ದಿನೇ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಠಾಣಾಧಿಕಾರಿಯವರಿಗೆ ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಈಗಾಗಲೇ ಇದರ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲೇ ಅಂತ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು. ನಂತರ ಪೊಲೀಸ್ ಠಾಣಾ ವತಿಯಿಂದ ಆಟೋಗಳಿಗೆ ಹೊಸದಾಗಿ ಪಿಪಿಎಸ್ ಸಂಖ್ಯೆಯನ್ನು ನೀಡಲಾಯಿತು.
ಈ ಸಂದರ್ಭ ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಚಮ್ಮಟ್ಟೀರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಬಿ.ಎಸ್ ಸುರೇಶ್, ಖಜಾಂಚಿ ಮಂಜು, ಸಂಘದ ಸದಸ್ಯರು ಹಾಗೂ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.