ನಾಪೋಕ್ಲು, ಫೆ. ೫: ಮೂರ್ನಾಡು ಗೌಡ ಮಹಿಳಾ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕಲ್ಲುಮುಟ್ಲು ಜಶ್ಮಿ ಚಿಂತು ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಮೂರ್ನಾಡು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಥಾಪನಾ ಸಭೆಯಲ್ಲಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಎಲ್ಲರ ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಬೈಲೋಳಿ ಮೆನಕಾ ನಂದ, ಕಾರ್ಯದರ್ಶಿಯಾಗಿ ತೆಕ್ಕಡೆ ಭವ್ಯ ಪುರುಷೋತ್ತಮ್, ಸಹ ಕಾರ್ಯದರ್ಶಿಯಾಗಿ ಮೇರ್ಕಜೆ ಸುಷ್ಮಾ ಶಿವಪ್ರಕಾಶ್, ಖಜಾಂಚಿಯಾಗಿ ತೆಕ್ಕಡೆ ಆಶಾ ಪ್ರಸನ್ನ, ಕಲ್ಲುಮುಟ್ಲು ಲತಾ ಬೋಪಯ್ಯ ಅವಿರೋಧವಾಗಿ ಆಯ್ಕೆಯಾದರು.

ಸಭೆಯಲ್ಲಿ ಒಕ್ಕೂಟದ ಸದಸ್ಯರಾದ ಅಂಚೆಮನೆ ದಮಯಂತಿ ಅವರು ಮಾತನಾಡಿ, ನಮ್ಮ ಸಂಸ್ಕೃತಿ- ಆಚಾರ ವಿಚಾರಗಳನ್ನು ಹಿರಿಯರಿಂದ ನಾವು ಕಲಿತು ಮುಂದಿನ ಪೀಳಿಗೆಗೂ ಕಲಿಸಬೇಕು. ಮಹಿಳೆಯರ ಶಿಕ್ಷಣ, ಆರೋಗ್ಯ, ಆರ್ಥಿಕ ಶಕ್ತೀಕರಣ ಮತ್ತು ಕುಟುಂಬ ಕಲ್ಯಾಣಕ್ಕೆ ಒಕ್ಕೂಟವು ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ ಎಂದರು. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿದರೆ ನಮ್ಮ ಒಕ್ಕೂಟ ಬಲಿಷ್ಠವಾಗುತ್ತದೆ. ಹಿರಿಯರ ಮಾರ್ಗದರ್ಶನದಿಂದ ಒಕ್ಕೂಟ ಒಳ್ಳೆಯ ಕೆಲಸಗಳನ್ನು ಮಾಡುವಂತಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಒಕ್ಕೂಟದ ಸದಸ್ಯರಾದ ಮುಕ್ಕಾಟಿ ಚುಷ್ಮಾ ದಿಲೀಪ್, ಮೇರ್ಕಜೆ ಕೃತಿಕಾ ಪ್ರಮೋದ್, ಬೈಲೋಳಿ ದಿವ್ಯ ತೇಜ್‌ಕುಮಾರ್, ಬಿಳಿಯಾರ ವನಿತಾ, ಮಮತಾ, ಮೌನ, ತೆಕ್ಕಡೆ ಅನು ಭೀಮಯ್ಯ, ಸಾವಿತ್ರಿ ಹಾಗೂ ಇತರರು ಹಾಜರಿದ್ದರು.