ಕಡಂಗ, ಫೆ. ೪: ಕೊಡಗಿನ ಪ್ರಮುಖ ದೇವಾಲಯಗಳಾದ ಶ್ರೀ ತಲಕಾವೇರಿ ದೇವಾಲಯದ ಸುತ್ತಮುತ್ತಲಿನಲ್ಲಿ ತಾಮರ ರೆಸಾರ್ಟ್ನ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯ ನಡೆಸಿದರು.
ರಸ್ತೆ ಬದಿಯಲ್ಲಿರುವ ಹಾಗೂ ಸುತ್ತಮುತ್ತಲಿರುವ ಕಸದ ರಾಶಿಗಳನ್ನು ಶೇಖರಿಸಿ ಸುಮಾರು ೨೫ ಪ್ಲಾಸ್ಟಿಕ್ ಚೀಲದಲ್ಲಿ ಕಸದ ರಾಶಿಗಳನ್ನು ತುಂಬಿದರು. ಈ ಸಂದರ್ಭ ಮಾತನಾಡಿದ ರೆಸಾರ್ಟ್ ಮ್ಯಾನೇಜರ್ ಶಕ್ತಿ ತರಣ್, ಕೊಡಗು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರದೇಶವಾಗಿದೆ. ಕೊಡಗಿನ ಪರಿಸರವನ್ನು ರಕ್ಷಿಸುವುದು ಪ್ರವಾಸಿಗರ ಕರ್ತವ್ಯವಾಗಿದೆ. ಕಸದ ರಾಶಿಗಳನ್ನು ರಸ್ತೆ ಬದಿಯಲ್ಲಿ ಎಸೆಯದೆ ಕೊಡಗಿನ ಸ್ವಚ್ಛತೆ ಯನ್ನು ಕಾಪಾಡಬೇಕೆಂದು ತಿಳಿಸಿದರು. ಸಂಸ್ಥೆಯ ಸಿಬ್ಬಂದಿಗಳು ತಿಂಗಳಿಗೊಮ್ಮೆ ಕೊಡಗು ಜಿಲ್ಲೆಯ ಹಲವಾರು ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಮುಂದಿನ ದಿನಗಳಲ್ಲೂ ಸಹ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೇವಸ್ಥಾನ ಹಾಗೂ ಇನ್ನಿತರ ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಈ ಕಾರ್ಯದಲ್ಲಿ ಸುಮಾರು ೨೫ ಸಿಬ್ಬಂದಿಗಳು ಭಾಗವಹಿಸಿದ್ದರು.