ವೀರಾಜಪೇಟೆ, ಫೆ. ೪: ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆಯ ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಮತ್ತು ಸಂತ ಅನ್ನಮ್ಮ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಜಾಗೃತಿ ಜಾಥಾ ನಡೆಯಿತು.

ಸಂತ ಅನ್ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಟೀನಾ ಫರ್ನಾಂಡಿಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ವೀರಾಜಪೇಟೆ ೨ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಟರಾಜ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ರಸ್ತೆಗಳು ನಮ್ಮ ಬದುಕಿನ ಭಾಗ. ನಾವು ಪ್ರತಿದಿನ ಮಾಡುವಂತಹ ಕೆಲಸ ಕಾರ್ಯಗಳನ್ನು ರಸ್ತೆಯಿಲ್ಲದೆ ಮಾಡಲು ಸಾಧ್ಯವಿಲ್ಲ, ನಮ್ಮ ಜೀವನದ ಭಾಗವಾಗಿರುವ ರಸ್ತೆಗಳನ್ನು ಹೇಗೆ ಉಪಯೋಗ ಮಾಡಬೇಕು; ಎಷ್ಟು ಮುಖ್ಯವಾಗಿ ನಾವು ನಮ್ಮ ಜೀವವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸುವುದೆ ಈ ಕಾರ್ಯಕ್ರಮದ ಮುಖ್ಯ ಧ್ಯೇಯ ಎಂದು ಹೇಳಿದರು.

ವೀರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಮಾತನಾಡಿ ರಸ್ತೆ ಅಪಘಾತ ನಡೆಯದಂತೆ ಮತ್ತು ಕಾನೂನು ಪರಿಪಾಲನೆ ಮಾಡಲು ನಾವು ಮತ್ತು ನಮ್ಮ ಮನೆಯವರು ಕಲಿಯಬೇಕು ಹಾಗೂ ಇತರರಿಗೂ ಕಲಿಸಬೇಕು, ಕಾನೂನಿನ ವಿರುದ್ಧವಾಗಿ ವಾಹನ ಚಾಲನೆ ಮಾಡಿದಲ್ಲಿ ದಂಡದ ಜೊತೆಗೆ ಕಾನೂನಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು, ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡುವುದು ಕಾನೂನು ಬಾಹಿರವಾಗಿದ್ದು ಈ ಬಗ್ಗೆ ಪೋಷಕರು ಸಹ ಎಚ್ಚರ ವಹಿಸಬೇಕು ಎಂದರು. ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಹಾಗೂ ವೀರಾಜಪೇಟೆ ಕಾನೂನು ಸೇವಾ ಸಮಿತಿ ಸದಸ್ಯರಾದ ನ್ಯಾ. ಮಂಜುನಾಥ್ ಆರ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ವೀರಾಜಪೇಟೆ ಹಾಗೂ ಸದಸ್ಯರು ಕಾರ್ಯದರ್ಶಿಗಳು ತಾಲೂಕು ಸೇವಾ ಸಮಿತಿ ನ್ಯಾ. ಪ್ರದೀಪ್ ಪೂತದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜೆ. ಆನಂದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ ಸೋಮಯ್ಯ ಮತ್ತು ವಕೀಲರ ಸಂಘದ ಅಧ್ಯಕ್ಷ ಸಿ.ಕೆ ಪೂವಣ್ಣ, ಪೊಲೀಸ್ ಅಧಿಕಾರಿ ಕಾವೇರಪ್ಪ, ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ನ್ಯಾಯಾಧೀಶರು ರಸ್ತೆ ಸುರಕ್ಷತಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು, ಜಾಥಾದಲ್ಲಿ ರೋಟರಿ ಶಾಲೆ, ಸಂತ ಅನ್ನಮ್ಮ ಶಾಲೆ, ಪ್ರಗತಿ ಶಾಲೆ, ತ್ರಿವೇಣಿ ಶಾಲೆ, ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.