ಮಡಿಕೇರಿ, ಫೆ. ೪: ವಿದ್ಯಾಸಂಸ್ಥೆಗೆ ನೀಡಿದ ಜಾಗವನ್ನು ಕಬಳಿಸಿಕೊಂಡು ಶಾದಿಮಹಲ್ ನಿರ್ಮಾಣಕ್ಕೆ ಮುಂದಾಗಲಾಗಿದೆ. ಜಾಗವನ್ನು ಅಕ್ರಮವಾಗಿ ವಕ್ಫ್ಗೆ ವರ್ಗಾಹಿಸಲಾಗಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ವಿದ್ಯಾಸಂಸ್ಥೆಗೆ ಚೆರಿಯಪರಂಬುವಿನ ಬೇತು ಎಂಬಲ್ಲಿ ವಿವಿಧ ಕುಟುಂಬಸ್ಥರು ಹಾಗೂ ಸರಕಾರದಿಂದ ಒಟ್ಟು ೪೭.೫೨ ಎಕರೆಗಳಷ್ಟು ಜಾಗ ದೊರೆತ್ತಿದ್ದು, ಶಾಲಾ ಸುಪರ್ದಿಯಲ್ಲಿದೆ. ಆದರೆ, ಕೆಲವರು ನಕಲಿ ದಾಖಲೆಗಳನ್ನು ಹಾಗೂ ಹೊಸ ಸರ್ವೆ ನಂಬರ್ ಅನ್ನು ಸೃಷ್ಟಿಸಿ ವಿದ್ಯಾಸಂಸ್ಥೆಯ ಜಾಗವನ್ನು ಕಬಳಿಸಿದ್ದಾರೆ. ಈ ಶಾಲಾ ಜಾಗದಲ್ಲಿ ಶಾದಿಮಹಲ್ ನಿರ್ಮಾಣ ಕಾರ್ಯ ನಡೆಸಲು ಭೂಮಿಪೂಜೆ ನಡೆಸಲಾಗಿತ್ತು. ವಿದ್ಯಾಸಂಸ್ಥೆಗೆ ಸೇರಿದ ಜಾಗದಲ್ಲಿ ಮಸೀದಿ, ಖಬರಸ್ಥಾನಕ್ಕೆ ಹಾಗೂ ಶಾದಿಮಹಲ್ ನಿರ್ಮಾಣಕ್ಕೆ ಜಾಗ ನೀಡಲಾಗಿದೆ ಎಂದು ಆರೋಪಿಸಿದರು.
೨೦೧೭ರಲ್ಲಿ ಒತ್ತುವರಿ ಮಾಡಿ ಜಾಗದ ಮಧ್ಯೆ ಹೊಸ ಸರ್ವೆ ನಂಬರ್ ಅನ್ನು ಸೃಷ್ಟಿಸಲಾಗಿದೆ. ೬೨ ಸೆಂಟ್ ಜಾಗವನ್ನು ವಕ್ಫ್ಗೆ ವರ್ಗಾವಣೆ ಮಾಡಿರುವುದು ಕಂಡುಬAದಿದ್ದು, ಇದು ಸರಿಯಲ್ಲ. ಇಲ್ಲಿ ಮರಗಳ ಹನನವಾಗಿದೆ. ಈ ಹಿಂದೆಯೆ ಸ್ಮಶಾನಕ್ಕೆ ೨.೫೦ ಎಕರೆ ಜಾಗ ಮಂಜೂರಾಗಿದ್ದು, ಅಕ್ರಮವಾಗಿ ಶಾಲೆ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಸ್ಮಶಾನಕ್ಕೆ ಸರಕಾರದಿಂದ ಮಂಜೂರಾದ ಜಾಗ ಇದೀಗ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವುದು ಅನುಮಾನ ಮೂಡಿಸಿದೆ. ಒತ್ತುವರಿ ಗಮನಕ್ಕೆ ಬಂದ ತಕ್ಷಣ ೨೦೨೩ರಲ್ಲಿಯೇ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿದ್ಯಾಸಂಸ್ಥೆ ಪ್ರಾಂಶುಪಾಲರು ಸಂಬAಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು. ಒಟ್ಟಾರೆ ಅಂದಾಜಿನ ಪ್ರಕಾರ ೪.೫೦ ಎಕರೆಯಷ್ಟು ಜಾಗ ಒತ್ತುವರಿಯಾಗಿದೆ ಎಂದು ದೂರಿದರು.
ಸರ್ವೆ ಬೇಡ
ವಿವಾದದ ಬಳಿಕ ಸರ್ವೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ನಮಗೆ ಸರ್ವೆಯ ಅಗತ್ಯವಿಲ್ಲ. ಹಲವು ವರ್ಷಗಳ ಹಿಂದೆಯೇ ಸರ್ವೆ ಆಗಿ ಶಾಲಾ ಜಾಗದ ಸರಹದ್ದು ತಿಳಿದಿದೆ. ಅದರಲ್ಲಿ ಒತ್ತುವರಿಯ ಬಗ್ಗೆಯೂ ಉಲ್ಲೇಖವಿದ್ದು, ಅಕ್ರಮವಾಗಿ ದಾಖಲೆ ಸೃಷ್ಟಿಸಿದ ಕುರಿತು ತನಿಖೆ ಕೈಗೊಂಡು ಲೋಪಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನು ಮುತ್ತಪ್ಪ ಒತ್ತಾಯಿಸಿದರು.
ಸೂಕ್ತ ಕ್ರಮವಹಿಸದಿದ್ದಲ್ಲಿ ಸಾರ್ವಜನಿಕರು, ಸಂಘ, ಸಂಸ್ಥೆಗಳನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಶಾಲಾ ಮೈದಾನ ಜಾಗ ಅತಿಕ್ರಮಣವಾದ ಪರಿಣಾಮ ಕೊಡವ ಕೌಟುಂಬಿಕ ಹಾಕಿ ಉತ್ಸವದ ಸಂದರ್ಭ ಹೆಚ್ಚುವರಿ ಮೈದಾನ ನಿರ್ಮಾಣ ಮಾಡಲಾಗುತ್ತಿಲ್ಲ. ಅಲ್ಲದೆ, ಈ ಜಾಗ ಮಳೆಗಾಲದಲ್ಲಿ ಜಲಾವೃತವಾಗುವ ಪ್ರದೇಶವಾಗಿದೆ. ಇಲ್ಲಿ ಕಟ್ಟಡ ನಿರ್ಮಿಸಿದರೆ ಸಮಸ್ಯೆಯಾಗುತ್ತದೆ. ಕೋಮು ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಇದಕ್ಕೆ ಅವಕಾಶ ನೀಡಬಾರದೆಂದು ಹೇಳಿದರು. ಸ್ಮಶಾನದ ಮಧ್ಯೆ ಶಾದಿಮಹಲ್ ನಿರ್ಮಾಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಮನುಮುತ್ತಪ್ಪ, ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಕೆ ಮಾಡುತ್ತ ತುಷ್ಠೀಕರಣ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಜಿಲ್ಲಾ ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್ ಮಾತನಾಡಿ, ಶಾಲಾ ಜಾಗಗಳನ್ನು ಪರಭಾರೆ ಅಥವಾ ವರ್ಗಾವಣೆ ಮಾಡುವಂತಿಲ್ಲ ಎಂದು ಸರಕಾರದ ಆದೇಶವಿದೆ. ಅದೇ ರೀತಿ ನದಿ ತಟದ ೧೦೦ ಮೀಟರ್ ಅಂತರದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ಕೂಡ ಇದೆ. ಇದನ್ನು ಉಲ್ಲಂಘಿಸಿ ಶಾದಿಮಹಲ್ ನಿರ್ಮಾಣ, ಜಾಗಗಳ ವರ್ಗಾವಣೆ ಆಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ. ಅರುಣ್ ಕುಮಾರ್, ಮಾಧ್ಯಮ ಪ್ರಮುಖ ಸಜಿಲ್ ಕೃಷ್ಣನ್, ನಾಪೋಕ್ಲು ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕರವಂಡ ಲವ ನಾಣಯ್ಯ ಹಾಜರಿದ್ದರು.