ಹೆಬ್ಬಾಲೆ, ಫೆ. ೪: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ ನಡೆದವು.
ಮಕ್ಕಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭರತನಾಟ್ಯ, ಜಾನಪದ ನೃತ್ಯ ಹಾಗೂ ಸಮೂಹ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ರಂಜಿಸಿದರು. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಮಾತನಾಡಿ, ಗ್ರಾಮಸ್ಥರು ಹಾಗೂ ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು.
ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಬೇಕು ಎಂದು ಕರೆ ನೀಡಿದರು.
ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರ,ದ ಪ್ರೊ. ಧರ್ಮಪ್ಪ, ಸಂಪನ್ಮೂಲ ವ್ಯಕ್ತಿ ಜಯಕುಮಾರ್, ಕಾಫಿ ಬೆಳೆಗಾರ ಯತೀಶ್ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಎಂ.ಸಿ. ಧರ್ಮರಾಜ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸೌಮ್ಯ, ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ನಿರ್ದೇಶಕ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಕವಿತಾ, ಕೊಡ್ಲಿಪೇಟೆ ಶಿಕ್ಷಕ ಕೆ.ಎನ್. ಕಿರಣ್ ಕುಮಾರ್, ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸತೀಶ್, ಸಹ ಶಿಕ್ಷಕ ಜಾನ್, ಸಿ.ಆರ್.ಪಿ. ಮುರುಳೀಧರ್, ದಾನಿಗಳಾದ ಎನ್.ಎನ್. ಧರ್ಮಪ್ಪ, ಮಹೇಶ್, ಸಿದ್ದಪ್ಪ, ತೋಪೇಗೌಡ, ಜವರಯ್ಯ, ಗೋಪಣ್ಣ, ಪುಟ್ಟರಾಜು, ಹೆಚ್.ಬಿ. ಧರ್ಮಪ್ಪ, ಸುವರ್ಣ, ಅಪ್ಪಾಜಿ, ಮಹೇಶಾಚಾರಿ, ರತ್ನಮ್ಮ ಸುರೇಶ್ ಪಾಲ್ಗೊಂಡಿದ್ದರು.
ಮೊದಲಿಗೆ ಗ್ರಾಮಸ್ಥರಿಗೆ ನಡೆದ ಕಬಡ್ಡಿ ಕ್ರೀಡಾಕೂಟ ಕ್ರೀಡಾಭಿಮಾನಿಗಳ ಮನ ರಂಜಿಸಿತು. ಕಾಫಿ ಬೆಳೆಗಾರ ಯತೀಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭ ದಾನಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಅತಿಥಿಗಳನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.