ಮಡಿಕೇರಿ, ಫೆ. ೩: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ದಾಖಲೆಗಳ ಮೂಲಕ ಇತಿಹಾಸ ಸೃಷ್ಟಿಸಿದೆ. ಇದೀಗ ಇದೇ ಹಾದಿಯಲ್ಲಿ ಕೊಡವ ಕುಟುಂಬಗಳ ನಡುವಿನ ಕೇರ್ ಬಲಿ ನಮ್ಮೆ (ಟಗ್ ಆಫ್ ವಾರ್) ಕೂಡ ಹೊಸತೊಂದು ದಾಖಲೆಗೆ ಪಾತ್ರವಾಗಿದೆ.

ಕಳೆದ ೨೦೨೨ನೇ ಇಸವಿಯಿಂದ ಆರಂಭಗೊAಡಿರುವ ಈ ಕೇರ್ ಬಲಿ ನಮ್ಮೆಗೆ ಇದೀಗ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರೆತಿದೆ. ಈ ಕ್ರೀಡೆಯನ್ನು ಪ್ರಾರಂಭಿಸಿದ ರೂವಾರಿಯಾಗಿರುವ ಪೊನ್ನೋಲತಂಡ ಕಿರಣ್ ಪೊನ್ನಪ್ಪಗೆ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ನ ಮೂಲಕ ಈ ಗೌರವ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ನ ಜನ್‌ಉತ್ಸವ್ ನ್ಯಾಷನಲ್ ಅವಾರ್ಡ್ ಅನ್ನು ಕಿರಣ್ ಪೊನ್ನಪ್ಪ ಅವರಿಗೆ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ಸಂಸ್ಕೃತಿ, ಕ್ರೀಡೆ ಇತ್ಯಾದಿಗಳ ಸಾಧನೆಗಾಗಿ ಸ್ಥಾನ ನೀಡಲಿದೆ. ಇದರಲ್ಲಿ ಪುರಾತನವಾದ ಹಾಗೂ ಸಾಂಪ್ರದಾಯಿಕವಾದ ಟಗ್ ಆಫ್ ವಾರ್ ಅನ್ನು ವಿನೂತನ ರೀತಿಯಲ್ಲಿ ಮರುಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಡೆಸಿರುವ ಪ್ರಯತ್ನವನ್ನು ಪರಿಗಣಿಸಲಾಗಿದೆ. ಗೌರವ ಪ್ರದಾನ ಸಂದರ್ಭ ಭಾರತೀಯ ಬುಕ್ ಆಫ್ ರೆಕಾರ್ಡ್ಸ್ ಅಧ್ಯಕ್ಷ ಮೀರ್ ಸಮೀಮ್ ರಾಜಾ, ಸಣ್ಣ ಕೈಗಾರಿಕೆ ಹಾಗೂ ಬೃಹತ್ ಕೈಗಾರಿಕೆ ಸಲಹಾ ಸಮಿತಿ ಸದಸ್ಯ ಅರವಿಂದ್ ಗಲಗಲಿ, ಐಪಿಎಸ್ ಅಧಿಕಾರಿ ಮಹಮದ್ ಸಜದ್ ಖಾನ್, ಜಿಎಂಎಸ್ ಏವಿಯೇಷನ್ ಟ್ರೆöÊನಿಂಗ್ ಇನ್ಸಿ÷್ಟಟ್ಯೂಟ್‌ನ ಡಾ. ಶರತ್ ಕುಮಾರ್, ಸ್ಯಾಂಡಲ್‌ವುಡ್ ತಾರೆಯರಾದ ಆದಿತ್ಯ ಪ್ರತಾಪ್ ಸಿಂಹ, ಬಿ.ವಿ. ಭಾರ್ಗವ್, ೨೦೨೨ರ ಮಿಸಸ್ ಇಂಡಿಯಾ ಪ್ರಶಸ್ತಿ ವಿಜೇತೆ ಬಲ್ಯಂಡ ವರ್ಷ ವಿಜಯ್ ಪಾಲ್ಗೊಂಡಿದ್ದರು.

ಕ್ರೀಡೆಯ ಕುರಿತು

೨೦೨೨ರಲ್ಲಿ ಕಕ್ಕಬ್ಬೆಯಲ್ಲಿ ಪೊನ್ನೋಲತಂಡ ಕಪ್ ಕೇರ್ ಬಲಿ ನಮ್ಮೆ ಪ್ರಾರಂಭಿಸಲಾಗಿದ್ದು, ಆರಂಭದ ವರ್ಷ ೪೦ ಕೊಡವ ಕುಟುಂಬಗಳು, ೨೦೨೩ರಲ್ಲಿ ಟಿ. ಶೆಟ್ಟಿಗೇರಿಯಲ್ಲಿ ನಡೆದ ಚೆಟ್ಟಂಗಡ ಕಪ್‌ನಲ್ಲಿ ೧೭೭ ಕುಟುಂಬ, ೨೦೨೪ರಲ್ಲಿ ನಾಪೋಕ್ಲುವಿನಲ್ಲಿ ನಡೆದ ಬೊಟ್ಟೋಳಂಡ ಕಪ್‌ನಲ್ಲಿ ೨೩೬ ಕುಟುಂಬ, ೨೦೨೫ರಲ್ಲಿ ಅರಮೇರಿಯಲ್ಲಿ ನಡೆದ ಬಾಳೆಕುಟ್ಟಿರ ಕಪ್‌ನಲ್ಲಿ ೨೮೨ ಕುಟುಂಬ ತಂಡಗಳು ಪಾಲ್ಗೊಂಡಿದ್ದವು.

ಈ ಬಾರಿ ನಾಪೋಕ್ಲುವಿನಲ್ಲಿ ಚೀಯಕಪೂವಂಡ ಕಪ್ ಜರುಗಲಿದೆ. ಹಗ್ಗಜಗ್ಗಾಟ ಕ್ರೀಡೆಯ ನಿಟ್ಟಿನಲ್ಲಿ ಕೊಡವ ಟಗ್ ಆಫ್ ವಾರ್ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು, ಕಿರಣ್ ಪೊನ್ನಪ್ಪ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪುರಾತನವಾದ, ಸಾಂಪ್ರದಾಯಿಕ ಕ್ರೀಡೆಗೆ ಒತ್ತು ನೀಡಿ ಇದನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನವನ್ನು ಗುರುತಿಸಲಾಗಿದೆ. ಈ ಮೂಲಕ ಕ್ರೀಡೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಬುಕ್ ಆಫ್ ರೆಕಾರ್ಡ್ ಗೌರವ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.