ಸೋಮವಾರಪೇಟೆ, ಫೆ. ೩: ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಆಲೇಕಟ್ಟೆಯಿಂದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುರಸ್ತೆವರೆಗಿನ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ, ಅಭಿವೃದ್ಧಿ ಸಹಿಸದ ಬಿಜೆಪಿ ವೃಥಾ ಆರೋಪ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಆಲೇಕಟ್ಟೆಯಿಂದ ಇನಕನಹಳ್ಳಿವರೆಗೆ ಸುಮಾರು ೭.೨೪ ಕಿ.ಮೀ. ರಸ್ತೆಗೆ ಸರ್ಕಾರ ೨೦ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಡಾಂಬರು ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಕಾಂಕ್ರೀಟ್ ಕಾಮಗಾರಿ ಬಾಕಿಯಿದೆ. ಮಳೆಯಿಂದಾಗಿ ಕೆಲಸ ನಿಧಾನಗತಿಯಾಗಿರುವುದು ಎಲ್ಲರಿಗೂ ತಿಳಿದಿದ್ದರೂ, ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ ಎಂದು ಆರೋಪಿಸಿದರು.

ತೀರಾ ಹದಗೆಟ್ಟಿದ್ದ ರಸ್ತೆಯನ್ನು ಸುಸಜ್ಜಿತಗೊಳಿಸಲು ಶಾಸಕ ಮಂತರ್ ಗೌಡ ಅವರು ೨೦ ಕೋಟಿ ಅನುದಾನ ಒದಗಿಸಿಕೊಟ್ಟಿದ್ದಾರೆ. ಮಳೆ, ಮರ ತೆರವು ಸೇರಿದಂತೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಕಾಂಕ್ರೀಟ್ ಕಾಮಗಾರಿ ಆರಂಭಗೊAಡಿಲ್ಲ. ಮಾರ್ಚ್ ತಿಂಗಳ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ಹೇಳಿದ್ದಾರೆ. ಆದರೂ ಪ್ರತಿಭಟನೆ ನಡೆಸಿದ ಬಿಜೆಪಿಯವರು ಶಾಸಕ ಮಂತರ್ ಗೌಡ ಅವರಿಗೆ ಧಿಕ್ಕಾರ ಕೂಗಿದ್ದಾರೆ. ಅಭಿವೃದ್ಧಿ ಕೆಲಸ ಮಾಡುತ್ತಿರುವುದನ್ನು ಸಹಿಸದೇ ಶಾಸಕರ ಉತ್ಸಾಹ ತಗ್ಗಿಸಲು ಇಂತಹ ಪ್ರಕ್ರಿಯೆ ನಡೆಸಲಾಗುತ್ತಿದೆ. ೨೫ ವರ್ಷ ಅಧಿಕಾರ ಅನುಭವಿಸಿದವರು ಇದೀಗ ವೃಥಾ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ ಎಂದು ಸತೀಶ್ ಹೇಳಿದರು.

ಶಾಸಕ ಮಂತರ್ ಅವರು ಗೆದ್ದು ಸರ್ಕಾರ ರಚನೆಯಾಗಿ ಕೇವಲ ಎರಡೂವರೆ ವರ್ಷದಲ್ಲೇ ಕಬ್ಬಿಣ ಸೇತುವೆ ನಿರ್ಮಾಣಕ್ಕೆ ಚಾಲನೆ, ಹೊಸಳ್ಳಿ ರಸ್ತೆಗೆ ಅನುದಾನ, ಶನಿವಾರಸಂತೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ, ಟರ್ಫ್ ಕಾಮಗಾರಿ ಪೂರ್ಣಗೊಳಿಸಿ ಕ್ರೀಡೆಗೆ ಅನುವು ಮಾಡಿಕೊಟ್ಟಿರುವುದು, ಆಲೇಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ, ಶತಮಾನೋತ್ಸವ ಭವನಕ್ಕೆ ೨ ಕೋಟಿ ಅನುದಾನ ಸೇರಿದಂತೆ ಮೂಲೆಗುಂಪಾಗಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದರು.

ದೋಣಿಗಾಲ್-ಮಡಿಕೇರಿ ಹೆದ್ದಾರಿ ಅಭಿವೃದ್ಧಿಗೆ ೯೦೦ ಕೋಟಿ ಅನುದಾನವನ್ನು ಸರ್ಕಾರ ಮೀಸಲಿಟ್ಟಿದ್ದು, ಡಿಪಿಆರ್ ಸರ್ವೆಗೆ ೭ ಕೋಟಿ ಬಿಡುಗಡೆ ಮಾಡಿದೆ. ಈವರೆಗೆ ೧೭೦೦ ಕೋಟಿಗೂ ಅಧಿಕ ಅನುದಾನವನ್ನು ಶಾಸಕ ಮಂತರ್ ಗೌಡ ಅವರು ಮಡಿಕೇರಿ ಕ್ಷೇತ್ರಕ್ಕೆ ತಂದಿದ್ದಾರೆ. ಈ ಬಗ್ಗೆ ಗೊಂದಲ ಇದ್ದರೆ ಬಿಜೆಪಿಯವರು ಸಂಬAಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಪರಿಶೀಲಿಸಲಿ ಎಂದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿ.ಎ. ಲಾರೆನ್ಸ್, ಪ್ರಧಾನ ಕಾರ್ಯದರ್ಶಿ ಕೆ.ಜೆ. ಸುನಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಾನಕಿ ವೆಂಕಟೇಶ್, ಚೌಡ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಐ. ಚೇತನ್ ಇದ್ದರು.