ಮಡಿಕೇರಿ, ಫೆ. ೨: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸರ್ವ ಸ್ಪರ್ಶಿ, ಸರ್ವ ವ್ಯಾಪಿಯಾಗಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಬಣ್ಣಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಭಾರತದ ಅಭಿವೃದ್ಧಿ ದೃಷ್ಟಿಕೋನದಲ್ಲಿಟ್ಟುಕೊಂಡು ಬಜೆಟ್ ಮಂಡನೆಯಾಗಿದ್ದು, ಎಲ್ಲಾ ವರ್ಗದವರಿಗೂ ಒಂದಲ್ಲ ಒಂದು ರೀತಿ ಅನುಕೂಲಕರ ಅಂಶಗಳಿAದ ಬಜೆಟ್ ಕೂಡಿದೆ. ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿಲ್ಲ. ಬದಲಾಗಿ ವಿಕಸಿತ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವುದು ಸ್ಪಷ್ಟವಾಗಿದೆ. ಕೃಷಿ, ರಕ್ಷಣಾ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೆ ಇದೊಂದು ಯುವಜನತೆ ಪರ ಬಜೆಟ್ ಕೂಡ ಆಗಿದೆ ಎಂದು ಹೇಳಿದರು.

ಟೀಕೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳು ಈ ಬಜೆಟ್ ಅನ್ನು ಟೀಕಿಸುತ್ತಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಪೂರಕವಾಗುವ ಹಲವು ಕಾರ್ಯಕ್ರಮಗಳಿವೆ. ಬೆಂಗಳೂರು ಅಭಿವೃದ್ಧಿಗೆ ರೂ. ೫ ಸಾವಿರ ಕೋಟಿ ನೀಡಲಾಗಿದೆ. ತಲಾ ಆದಾಯ ಕಡಿಮೆ ಇರುವ ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ ಹೆಚ್ಚಿನ ಕಾರ್ಯಕ್ರಮವನ್ನು ನೀಡಲಾಗಿದೆ. ರಾಜ್ಯಗಳಿಗೆ ೧.೪ ಲಕ್ಷ ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಮಗ್ರ ಭಾರತದ ದೃಷ್ಟಿಕೋನದಲ್ಲಿ ಬಜೆಟ್ ಮಂಡಿಸಬೇಕು. ಪ್ರಸಕ್ತ ಆಯವ್ಯಯದಲ್ಲಿ ಸಾಲದ ಪ್ರಮಾಣವೂ ಕಡಿಮೆಯಾಗಿದೆ ಎಂದು ವಿವರಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ವಿಕಸಿತ ಭಾರತ ದೃಷ್ಟಿಯಲ್ಲಿ ಬಜೆಟ್ ಮಂಡನೆಯಾಗಿದ್ದು, ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಕೇಂದ್ರ ಇಟ್ಟಿದೆ. ರಕ್ಷಣಾ ಕ್ಷೇತ್ರವನ್ನು ಬಲಪಡಿಸಲು ಸರಕಾರ ಮುಂದಾಗಿದೆ. ಕೃಷಿಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ, ಬೆಂಗಳೂರು-ಚೈನ್ನೆöÊ ಹಾಗೂ ಹೈದರಬಾದ್‌ಗೆ ಹೈಸ್ಪೀಡ್ ರೈಲು, ಶ್ರೀಗಂಧ, ಕೋಕೋ, ತೆಂಗು, ಗೇರು ಹಣ್ಣು ಕೃಷಿಗೆ ಉತ್ತೇಜನ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ, ಔಷಧಗಳ ಬೆಲೆ ಇಳಿಕೆ ಹೀಗೆ ಎಲ್ಲಾ ವಲಯಕ್ಕೂ ಸಮಾನ ಪ್ರಮಾಣದ ಒತ್ತನ್ನು ಕೇಂದ್ರ ಸರಕಾರ ನೀಡಿದೆ. ಜೊತೆಗೆ ಕ್ರೀಡಾ ವಲಯವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕ್ರೀಡಾ ತರಬೇತಿ ಕೇಂದ್ರಗಳು, ನುರಿತ ತರಬೇತುದಾರರ ನಿಯೋಜನೆಯನ್ನು ಸೇರಿಸಿರುವುದು ಗಮನಾರ್ಹ ಎಂದು ಶ್ಲಾಘಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರಾದ ಬಿ.ಕೆ. ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್, ಮಾಧ್ಯಮ ಪ್ರಮುಖ್ ಸಜಿಲ್ ಕೃಷ್ಣನ್ ಉಪಸ್ಥಿತರಿದ್ದರು.