ಕುಶಾಲನಗರ, ಫೆ. ೧: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹೆಸರಿನಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಸಾಮಾಜಿಕ ಅಸಮಾನತೆಗೆ ಪ್ರಚೋದನೆ, ರಾಜಕೀಯ ಮೇಲಾಟ ಮಾಡುತ್ತಿರುವುದಾಗಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎಸ್. ಅಶೋಕ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ಅನಧಿಕೃತ ನಿರ್ಣಯ ವಿರುದ್ಧ ಕಾನೂನುಬದ್ಧವಾಗಿ ಆಕ್ಷೇಪಣೆ ವ್ಯಕ್ತಪಡಿಸಿದ್ದ ವಿಷಯವಾಗಿ ಕೆಲವರು ಅನವಶ್ಯಕವಾಗಿ ಸಮುದಾಯಗಳ ನಡುವೆ ಗೊಂದಲ ಸೃಷ್ಟಿ ಮಾಡುತ್ತಿರುವುದಾಗಿ ಹೇಳಿದರು.

ಅಂಬೇಡ್ಕರ್ ಭವನ ನಿರ್ಮಾಣ ವಿಷಯದಲ್ಲಿ ತಾವುಗಳು ಯಾವುದೇ ರೀತಿಯಲ್ಲಿ ಅಡ್ಡಿ ಉಂಟು ಮಾಡಿಲ್ಲ. ಭವನ ನಿರ್ಮಾಣ ಬಗ್ಗೆ ತಾವು ಕೂಡ ಬೆಂಬಲ ನೀಡುತ್ತಿದ್ದು ಈ ವಿಷಯದಲ್ಲಿ ಕೆಲವರು ಅನವಶ್ಯಕ ಮೂಗು ತೂರಿಸಿ ಗೊಂದಲ ಉಂಟು ಮಾಡುತ್ತಿದ್ದಾರೆ. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದು, ಈ ಬಗ್ಗೆ ಈಗಾಗಲೇ ಪೊಲೀಸ್ ದೂರು ನೀಡಲಾಗಿದೆ. ಸಾರ್ವಜನಿಕ ಸ್ಥಿತಿಗತಿಗೆ ಮತ್ತು ತಮ್ಮ ಹಿತಾಸಕ್ತಿಯ ವಿರುದ್ಧ ತಪ್ಪು ಮಾಹಿತಿ ನೀಡುವವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ ಎಂದು ಹೇಳಿದರು. ದೂರವಾಣಿಯಲ್ಲಿ ವ್ಯಕ್ತಿಯೊಬ್ಬ ತನಗೆ ಬೆದರಿಕೆ ಒಡ್ಡಿದ್ದು ಈ ಬಗ್ಗೆ ಕೂಡ ಪೊಲೀಸ್ ಪುಕಾರು ನೀಡಲಾಗಿದೆ ಎಂದು ತಿಳಿಸಿದರು.

ಹೆಬ್ಬಾಲೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಈ ಎಲ್ಲಾ ಸಮಸ್ಯೆಗಳಿಗೆ ಮೂಲಕಾರಣವಾಗಿದ್ದಾರೆ ಎಂದು ಆರೋಪಿಸಿದ ಅಶೋಕ್, ಸಭೆಯಲ್ಲಿ ಗೈರು ಹಾಜರಾದ ಸದಸ್ಯರ ಸಹಿಯನ್ನು ನಿಯಮಬಾಹಿರವಾಗಿ ಹಾಕಿಸಿಕೊಂಡು ನಿರ್ಣಯ ಮಾಡುತ್ತಿರುವುದಾಗಿ ಹೇಳಿದರು.

ಸರ್ವೆ ನಂಬರ್ ೧೪೮/೨ ರ ೮೦, ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಾನೂನುಬಾಹಿರವಾಗಿ ಜಮೀನು ನೀಡಲು ನಿರ್ಣಯ ಕೈಗೊಂಡಿರುವ ಬಗ್ಗೆ ತಾವುಗಳು ಮತ್ತು ಗ್ರಾಮಸ್ಥರು ಆಕ್ಷೇಪಣೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಯಾವುದೇ ರೀತಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡ್ಡಿ ಅಥವಾ ಹಾನಿ ಉಂಟುಮಾಡುವ ಉದ್ದೇಶ ನಮ್ಮದಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಿರ್ದಿಷ್ಟ ಉದ್ದೇಶಗಳಿಗೆ ಮೀಸಲಿಡಲಾದ ಜಾಗವನ್ನು ಪಂಚಾಯಿತಿ ಮೂಲಕ ನೀಡಲು ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದರು. ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಹೆಚ್.ಎಸ್. ಮಂಜುನಾಥ್ ಮಾತನಾಡಿ, ಗ್ರಾಮದಲ್ಲಿ ಎಲ್ಲಾ ಸಮುದಾಯ ಜನರು ಅನ್ಯೋನ್ಯವಾಗಿದ್ದು, ಕೆಲವರು ರಾಜಕೀಯ ದೊಂಬರಾಟಕ್ಕೆ ಈ ವಿಷಯವನ್ನು ಬಳಸುತ್ತಿದ್ದಾರೆ. ಕೆಟ್ಟ ಆಲೋಚನೆಗಳ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರುವುದಾಗಿ ಹೇಳಿದರು.

ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ ಸಮುದಾಯ ಜನಾಂಗದ ನಡುವೆ ಬಿರುಕು ಉಂಟುಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿಗೋಸ್ಕರ ಬಳಸಬೇಕಾದ ಜಾಗವನ್ನು ಕಾನೂನು ಬದ್ಧವಾಗಿ ನಿಯಮಾನುಸಾರವಾಗಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.