ಸಿದ್ದಾಪುರ, ಜ. ೨೧: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೫-೨೦೨೬ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ವಿದ್ಯಾರ್ಥಿನಿ ಹರ್ಷಿತ.ಎ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಾತನಾಡಿ, ಶಾಲೆಯ ಮೈದಾನದ ಆವರಣದೊಳಗೆ ಅಶುಚಿತ್ವ ತಾಂಡವವಾಡುತ್ತಿದ್ದು ಇದರಿಂದಾಗಿ ಶಾಲೆಯ ಮಕ್ಕಳಿಗೆ ಮೈದಾನದಲ್ಲಿ ಆಟವಾಡಲು ತೊಂದರೆ ಆಗುತ್ತಿದೆ ಎಂದು ತಿಳಿಸಿದರು. ಅಲ್ಲದೆ ಎಲ್ಲೆಂದರಲ್ಲಿ ಕಸ ಸುರಿಯದಂತೆ ತಿಳಿಸಿದ ಮಕ್ಕಳು ಗ್ರಾಮ ಪಂಚಾಯಿತಿಯಿAದ ಕಸದ ತೊಟ್ಟಿಗಳನ್ನು ಒದಗಿಸಿ ಕೊಡುವಂತೆ ಮನವಿ ಮಾಡಿದರು. ಕರಡಿಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಾತನಾಡಿ, ಶಾಲೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ರಂಗ ಮಂದಿರ ಇಲ್ಲದ ಹಿನ್ನೆಲೆಯಲ್ಲಿ ರಂಗ ಮಂದಿರವನ್ನು ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ದುಬಾರೆ ಹಾಡಿಯ ಮಕ್ಕಳು ಮಾತನಾಡಿ, ದುಬಾರೆ ಸರಕಾರಿ ಶಾಲೆಯು ಸಿದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟಿದ್ದರು ಕೂಡ ಈ ಶಾಲೆಗೆ ಗ್ರಾಮ ಪಂಚಾಯಿತಿಯಿAದ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡದ ಹಿನ್ನೆಲೆಯಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಶಾಲೆಗೆ ವಿದ್ಯುತ್ ಸೌಲಭ್ಯ, ಶಾಲೆಯ ಸುತ್ತಲೂ ತಡೆಗೋಡೆ ಹಾಗೂ ಕೊಳಚೆ ನೀರು ಹರಿದು ಬಿಡಲು ಇಂಗು ಗುಂಡಿ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.
ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುತ್ತಿದ್ದು, ಶಿಕ್ಷಕರು ಮಕ್ಕಳ ಮನೆಗೆ ತೆರಳಿ ಮಕ್ಕಳ ಮನವೊಲಿಸಿ ಶಾಲೆಗೆ ಕರೆಯುತ್ತಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿಕ್ಷಕರು ಸಭೆಗೆ ಮಾಹಿತಿ ನೀಡಿದರು. ಪೋಷಕರು ತಮ್ಮ ಮಕ್ಕಳನ್ನು ದಿನನಿತ್ಯ ಶಾಲೆಗೆ ಕಳಿಸಿಕೊಡುವಂತೆ ಮನವಿ ಮಾಡಿದರು. ಗ್ರಾಮ ಸಭೆಗೆ ಆಗಮಿಸಿದ್ದ ಕಾರ್ಯಕ್ರಮ ಸಂಯೋಜಕರು ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿ ಮಧು ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು. ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಉಂಟಾದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ - ೧೦೯೮ ಮತ್ತು ೧೧೨ಗೆ ಮಾಹಿತಿ ನೀಡುವಂತೆ ತಿಳಿಸಿದರು. ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಬಗ್ಗೆ ಹಾಗೂ ದೈಹಿಕ ಮತ್ತು ಮಾನಸಿಕ ಹಿಂಸೆ ಆದಲ್ಲಿ ಅದರಿಂದ ಕಾನೂನಿನ ಮೂಲಕ ಯಾವ ರೀತಿಯಲ್ಲಿ ರಕ್ಷಣೆಯನ್ನು ಪಡೆದುಕೊಳ್ಳಬಹುದೆಂದು ವಿವರಿಸಿದರು.
ಅಕ್ಕಪಡೆಯ ಮಹಿಳಾ ವಿಶೇಷ ಘಟಕದ ಸಿಬ್ಬಂದಿ ಸುಮತಿ ಮಾತನಾಡಿ, ಮಹಿಳೆಯರಿಗೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಸಖಿ ಒನ್ ಸ್ಟಾಪ್ ಸೆಂಟರ್ ತೆರೆಯಲಾಗಿದ್ದು ಕೌಟುಂಬಿಕ ತೊಂದರೆಗಳು ಇದ್ದಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಅಲ್ಲದೆ ಶಾಲೆ-ಕಾಲೇಜು ಮಕ್ಕಳಿಗೆ ಏನಾದರೂ ತೊಂದರೆಗಳು ಸಂಭವಿಸಿದ್ದಲ್ಲಿ ಅಕ್ಕಪಡೆಯನ್ನು ಸಂಪರ್ಕಿಸುವAತೆ ತಿಳಿಸಿದರು.
ಗ್ರಾಮ ಸಭೆಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್ ಆಶಾಕುಮಾರಿ ಮಾತನಾಡಿ ಮಕ್ಕಳ ವಿವಿಧ ಬೇಡಿಕೆಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಹಂತಹAತವಾಗಿ ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ಪಿ.ಡಿ.ಓ. ಆಶಾ ಕುಮಾರಿ ಸ್ವಾಗತಿಸಿ, ವಂದಿಸಿದರು.