ಆಲೂರು-ಸಿದ್ದಾಪುರ, ಜ. ೨೧: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿಯ ಮಾಲಂಬಿ ವಾರ್ಡ್ಸಭೆ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮಾಲಂಬಿ, ಕಣಿವೆ, ಬಸವನಹಳ್ಳಿ, ಮಲ್ಲೇಶ್ವರ, ಪಳಂಗೋಟು, ಕಂತೆ ಬಸವನಹಳ್ಳಿ ವ್ಯಾಪ್ತಿಯ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದ್ದು, ಅನೇಕ ರಸ್ತೆಗಳು ಕೆರೆಯಂತಾಗಿವೆ. ಅದನ್ನು ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ರಸ್ತೆ ಮಾಡಲು ಸಾಧ್ಯವಾಗದಿದ್ದರೆ ಗುಂಡಿಗಳಿಗೆ ಮಣ್ಣು ಹಾಕಿಸಿ, ರಸ್ತೆ ಬದಿಯ ಕಾಡು ಕಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕೆಲವೆಡೆ ಬೀದಿ ದೀಪಗಳಿಲ್ಲ. ಅದನ್ನು ಹಾಕಿಸಿಕೊಡಿ. ಮಾಲಂಬಿ ಸರ್ಕಾರಿ ಶಾಲೆಯನ್ನು ಉಳಿಸಲು ಜನಪ್ರತಿನಿಧಿಗಳು ಪ್ರಯತ್ನ ಪಡಬೇಕು. ಈ ಹಿಂದೆ ಸುರಿದ ಮಳೆಗೆ ಹಂಚು ಹಾರಿಹೋಗಿದ್ದು, ಅದನ್ನು ಶಾಲಾಭಿವೃದ್ಧಿ ಸಮಿತಿಯವರೆ ಹಾಕ್ಸಿದ್ದೇವೆ ಈ ರೀತಿ ಆಗಬಾರದು. ಕೆಲವೆಡೆ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದು ಇದರಿಂದ ನೀರು ಪೋಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆ ಈ ಭಾಗದಲ್ಲಿ ಹಳ್ಳ ಹಿಡಿದಿದೆೆ ಎಂಬಿತ್ಯಾದಿ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಾದ ಸುಂದರ್, ಸತೀಶ್, ಈರಪ್ಪ, ಅಕ್ಕಮ್ಮ, ಮಂಜುನಾಥ್, ಸುನಿಲ್, ಕಣಿವೆ-ಬಸವನಹಳ್ಳಿ ದಿನೇಶ್, ವಿಜಯ್, ರಾಮಕುಟ್ಟಿ, ದಿನೇಶ್, ತಮ್ಮಣ್ಣ, ದಿವಿನ್, ಹರೀಶ್, ಜಾನಕಿ ಗಂಗಾಧರ್ ಮುಂತಾದವರು ಸಭೆಯಲ್ಲಿ ಪ್ರಸ್ತಾಪಿಸಿದರು.

ನಂತರ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಸಂಬAಧಪಟ್ಟವರ ಗಮನಕ್ಕೆ ತರಲಾಗುವುದು. ಹಂತಹAತವಾಗಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಮುತ್ತಮ್ಮ ಮಾತನಾಡಿ, ನಮಗೆ ಸಿಕ್ಕ ಅವಕಾಶದಲ್ಲಿ ಗ್ರಾಮದ ಅಭಿವೃದ್ಧಿ ಮಾಡಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯೆ ಯಮುನಾ ಸುರೇಶ್ ಮಾತನಾಡಿ, ನಮಗೆ ಅನುದಾನ ಕಡಿಮೆ ಬಂದಿತ್ತು. ಅದರಲ್ಲಿ ಈ ಭಾಗದ ಸದಸ್ಯರೆಲ್ಲಾ ಸೇರಿ ಅವಶ್ಯಕತೆ ಇರುವ ಗ್ರಾಮಗಳಲ್ಲಿ ಅಭಿವೃದ್ಧಿಗಾಗಿ ವಿನಿಯೋಗಿಸಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್ ಮಾತನಾಡಿ, ಪ್ರಾರಂಭದಲ್ಲಿ ಕೊರೊನಾ ಬಂದು ಅಭಿವೃದ್ಧಿ ಸಾಧ್ಯವಾಗಿಲ್ಲ. ನಂತರ ಅನೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದರು.

ಈ ಸಂದರ್ಭ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿ, ತಾನು ಅಧ್ಯಕ್ಷೆಯಾಗಿ ಎರಡುವರೆ ವರ್ಷದ ಅವಧಿಯಲ್ಲಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದೇನೆ ಎಂದರು.