ಶನಿವಾರಸಂತೆ, ಜ. ೨೧: ನಿವೃತ್ತ ನೌಕರರು ನಿವೃತ್ತಿಯ ನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡ್ಲಿಪೇಟೆಯ ಶ್ರೀಮತಿ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ಗಣ್ಯರು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ - ಕೊಡ್ಲಿಪೇಟೆ-ಶನಿವಾರಸಂತೆ ಹೋಬಳಿ ಘಟಕದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಿವೃತ್ತ ನೌಕರರು ಜೀವನದಲ್ಲಿ ಆರ್ಥಿಕ ಭದ್ರತೆಯೊಂದಿಗೆ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕು. ಎಲ್ಲಾ ಚಿಂತನೆಗಳೊAದಿಗೆ ಜೀವನ ಮೌಲ್ಯವನ್ನು ಅರಿತುಕೊಳ್ಳಬೇಕು. ಸಂಘ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪುರಸ್ಕರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ತನ್ವೀರ್ ಹುಸೇನ್ ದಂಪತಿ, ಜೆ.ಆರ್ ಕೃಷ್ಣಯ್ಯ, ಎಂ.ಆರ್ ನಿರಂಜನ್ ಹಾಗೂ ಎಸ್.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅಧಿಕ ಅಂಕ ಗಳಿಸಿದ ನಿಡ್ತ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ವಿಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿಯವರನ್ನು ಸನ್ಮಾನಿಸಿ, ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.
ಸಂಘದ ಖಜಾಂಚಿ ಡಿ.ಬಿ ಸೋಮಪ್ಪ ಸಭೆಯಲ್ಲಿ ವಾರ್ಷಿಕ ಆಯವ್ಯಯ ಮಂಡಸಿದಾಗ ಸದಸ್ಯರಾದ ಶಿವಕುಮಾರ್, ಎಸ್.ಪಿ. ರಾಜ, ರುದ್ರಪ್ಪ, ಕೆ.ವಿ. ನಾಗರಾಜ್ ಚರ್ಚೆಯಲ್ಲಿ ಪಾಲ್ಗೊಂಡರು.
ವಾರ್ಷಿಕ ಮಹಾಸಭೆಯ ಪ್ರಯುಕ್ತ ಹಿರಿಯ ಸದಸ್ಯ ಸಿ.ಎಲ್ ಸುಬ್ಬಯ್ಯ ಅವರು ದಿವಂಗತ ಪತ್ನಿ ವನಜಾಕ್ಷಿ ಸ್ಮರಣಾರ್ಥ ಪ್ರಾಯೋಜಕತ್ವದಲ್ಲಿ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಎಸ್.ಬಿ. ನಂಜಪ್ಪ ಮಾತನಾಡಿ, ಸರ್ಕಾರಿ ನಿವೃತ್ತ ನೌಕರರ ಸಂಘ ಕೊಡ್ಲಿಪೇಟೆ-ಶನಿವಾರಸಂತೆ ಹೋಬಳಿಗಳ ಘಟಕ ೨೫ ವರ್ಷಗಳನ್ನು ಪೂರೈಸಿದ್ದು ಮುಂದಿನ ವರ್ಷದ ವಾರ್ಷಿಕ ಮಹಾಸಭೆಯ ಜೊತೆಯಲ್ಲೆ ಬೆಳ್ಳಿ ಹಬ್ಬ ಆಚರಿಸುವುದು ಹಾಗೂ ಸ್ಮರಣ ಸಂಚಿಕೆ ಹೊರತುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಸಭೆಯ ಆರಂಭದಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು. ಕಾರ್ಯದರ್ಶಿ ಬಿ.ಬಿ. ನಾಗರಾಜ್ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿಯ ವಾರ್ಷಿಕ ವರದಿ ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎ. ಹಮೀದ್, ಕೆ.ಎ. ತನ್ವೀರ್ ಹುಸೇನ್, ಎ.ಈ. ಸುಬ್ಬಯ್ಯ, ಕೃಷ್ಣರಾಜ್, ಕೆ.ವಿ. ನಾಗರಾಜ್, ಎ.ಎಂ. ಪುಟ್ಟಸ್ವಾಮಿ, ಸಿ.ಕೆ. ಹುಮಾರಪ್ಪ, ರುಕ್ಮಿಣಿ ಉಪಸ್ಥಿತರಿದ್ದರು. ಸದಸ್ಯರಾದ ಎಲಿಜಬೆತ್ ಪ್ರಾರ್ಥಿಸಿ, ನಾಗರಾಜ್ ಸ್ವಾಗತಿಸಿ, ತನ್ವೀರ್ ಹುಸೇನ್ ಹಾಗೂ ಪುಟ್ಟಸ್ವಾಮಿ ವಂದಿಸಿದರು. ಸದಸ್ಯೆ ಬಿ.ಸಿ. ಪರಿಮಳ ಕಾರ್ಯಕ್ರಮ ನಿರ್ವಹಿಸಿದರು.