ಗೋಣಿಕೊಪ್ಪಲು, ಜ. ೨೧: ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬೆಕ್ಕೆಸೊಡ್ಲೂರುವಿನ ಬ್ರಹ್ಮಗಿರಿ ಪೊಮ್ಮಕ್ಕಡ ಕೂಟ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಪೊನ್ನಂಪೇಟೆಯ ಅಪ್ಪಚ್ಚಕವಿ ಕೊಡವ ಕೂಟ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನವನ್ನು ಪೋರಾಡ್ ಪೊಮ್ಮಕ್ಕಡ ಕೂಟ ಹಾಗೂ ನಾಲ್ಕನೇ ಸ್ಥಾನವನ್ನು ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ತನ್ನದಾಗಿಸಿಕೊಂಡಿತು.

ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕೊಡವ ಪೊಮ್ಮಕ್ಕಡ ಕೂಟಗಳ ನಡುವಿನ ಥ್ರೋಬಾಲ್ ಪಂದ್ಯವನ್ನು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜನೆ ಮಾಡ ಲಾಗಿತ್ತು. ತಾಲೂಕಿನ ವಿವಿಧ ಭಾಗದಿಂದ ೧೩ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಸೇರಿದಂತೆ ಗಣ್ಯರು ಪಂದ್ಯಾವಳಿಗೆ ಚಾಲನೆ ನೀಡಿದರು.

ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೋ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಮೊದಲ ಬಾರಿಗೆ ಕೊಡವ ಪೊಮ್ಮಕ್ಕಡ ಕೂಟಗಳ ನಡುವೆ ಥ್ರೋಬಾಲ್ ಕಳಿ ನಮ್ಮೆಯನ್ನು ಆಯೋಜನೆ ಮಾಡಲಾಗಿದೆ. ಉತ್ತಮ ರೀತಿಯ ಬೆಂಬಲ ವ್ಯಕ್ತವಾಗಿದೆ. ಮುಂದಿನ ವರ್ಷಗಳಲ್ಲಿ ಜಿಲ್ಲಾಮಟ್ಟದಲ್ಲಿ ಕಳಿ ನಮ್ಮೆಯನ್ನು ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿದೆ. ಮಹಿಳೆಯರಿಗಾಗಿಯೇ ಕ್ರೀಡೆ ಆಯೋಜಿಸುತ್ತಿರುವುದು ಶ್ಲಾಘನೀಯ. ಜಂಜಾಟದಲ್ಲಿರುವ ಮಹಿಳೆಯರು ಇಂತಹ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವ ಅವಕಾಶವೂ ಲಭ್ಯವಾಗುತ್ತದೆ. ನಾಡಿನ ದಾನಿಗಳು ಕ್ರೀಡೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವಂತಾಗಬೇಕು ಎಂದರು.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನಿವೃತ್ತ ಪ್ರಾಂಶುಪಾಲ ಪ್ರೊ.ಇಟ್ಟಿರ ಬಿದ್ದಪ್ಪ ಮಾತನಾಡಿ, ಮಹಿಳೆಯರ ಥ್ರೋಬಾಲ್ ಕಳಿ ನಮ್ಮೆ ಆರಂಭದಲ್ಲಿಯೇ ಯಶಸ್ಸನ್ನು ಕಂಡಿದೆ. ವರ್ಷಂಪ್ರತಿ ಮತ್ತಷ್ಟು ಉತ್ತಮವಾಗಿ ಪಂದ್ಯಾವಳಿಗಳು ನಡೆಯುವಂತಾಗಲಿ. ಕೊಡಗು ಜಿಲ್ಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಕಾಳಮಂಡ ಜಗತ್, ಕಾಳಮಂಡ ನಯನ, ಸಣ್ಣುವಂಡ ಪಾರ್ವತಿ ಮಂದಣ್ಣ, ಅರಮಣಮಾಡ ಚಿಟ್ಟಿಯಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಚಿರಿಯಪಂಡ ಇಮ್ಮಿ ಬೋಜಮ್ಮ, ಇಟ್ಟಿರ ಮಧು, ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಚೆಪ್ಪುಡೀರ ಕಾರ್ಯಪ್ಪ, ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಕೋಟೆರ ಕಿಶನ್, ಮೂಕಳೆರ ಕಾವ್ಯ ಮಧು, ಗುಮ್ಮಟ್ಟಿರ ಗಂಗಮ್ಮ, ಮಿದೇರಿರ ಕವಿತಾ ರಾಮು, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಮೂಕಳೇರ ಆಶಾ ಪೂಣಚ್ಚ, ಮೂಕಳೇರ ಲೀಲಾವತಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಮಲ್ಲಮಾಡ ಸಂತೋಷ್, ರಾಜರೈ, ಚಿರಿಯಪಂಡ ಸುಬ್ಬಯ್ಯ, ಸೋಯಾಲ್ ಜಯನ್, ಕೇಚೆಟ್ಟಿರ ತಮ್ಮಯ್ಯ ಕಾರ್ಯನಿರ್ವಹಿಸಿದರು.

-ಹೆಚ್.ಕೆ. ಜಗದೀಶ್