ಕಣಿವೆ, ಜ. ೨೧: ರಸ್ತೆಯ ಬದಿಗಳಲ್ಲಿ, ಚರಂಡಿಗಳಲ್ಲಿ, ಬಸ್ ನಿಲ್ದಾಣ, ಹೊಟೇಲ್ ಆಸುಪಾಸುಗಳಲ್ಲಿ ಬಿದ್ದು ಒದ್ದಾಡುವ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಪರಿಕರಗಳನ್ನು ಆಯ್ದು ಸಂಗ್ರಹಿಸುವ ನಿರ್ಗತಿಕ ಮಂದಿ ಒಂದು ರೀತಿಯಲ್ಲಿ ಪರಿಸರ ಸ್ನೇಹಿಗಳಾಗಿದ್ದಾರೆ.
ಕೊನೆಯ ಪಕ್ಷ ಚಪ್ಪಲಿಗಳೂ ಕೂಡ ಧರಿಸಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿರುವ ಈ ಮಂದಿ ಬರಿಗಾಲಲ್ಲಿ ಕೊಳಕು ಸ್ಥಳಗಳಿಗೆ ತೆರಳಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವ ಶ್ರಮದ ಹಿಂದೆ ಪರಿಸರದ ಸ್ವಚ್ಛತೆಯೂ ಅಡಗಿದೆ.
ಒಂದು ಕೆಜಿ ತೂಗುವ ಪ್ಲಾಸ್ಟಿಕ್ಗಳಿಗೆ ಮಾರುಕಟ್ಟೆಯಲ್ಲಿ ರೂ.೧೫ ದೊರಕುತ್ತದೆ. ದಿನಕ್ಕೆ ಒಬ್ಬರು ತಲಾ ೨೫ ಕೆಜಿಯಷ್ಟು ಪ್ಲಾಸ್ಟಿಕ್ ಸಂಗ್ರಹಿಸುತ್ತೇವೆ. ದಿನಕ್ಕೆ ಹೇಗೆ ಅಂದರೂ ೩೦೦ ರಿಂದ ೪೦೦ ರೂಗಳಷ್ಟು ಆದಾಯ ಮಾಡುತ್ತೇವೆ ಎನ್ನುವ ಪ್ಲಾಸ್ಟಿಕ್ ಹೆರಕುವ ಕಾರ್ಮಿಕ ಸಂತೋಷ, ಪ್ರತಿ ದಿನ ಬೆಳಿಗ್ಗೆ ಹೆದ್ದಾರಿಗಳ ಅಂಚಿನಲ್ಲಿ, ನಗರದ ವಿವಿಧ ಬಡಾವಣೆಗಳ ಆಯಕಟ್ಟಿನ ಸ್ಥಳಗಳಲ್ಲಿ ಸಂಚರಿಸುವ ನನಗೆ ನನ್ನ ವೃತ್ತಿಯಲ್ಲಿ ಸಂತಸವಿದೆ ಎನ್ನುತ್ತಾರೆ.
ಇನ್ನು ಕೆಲವು ಮಹಿಳೆಯರು ಕೂಡ ತಂಡವಾಗಿ ಆಗಮಿಸಿ ಕಸ ಸುರಿದಿರುವಲ್ಲಿ, ಕಲ್ಯಾಣ ಮಂಟಪ, ಹೊಟೇಲ್ ಆಸುಪಾಸು ಹಾಗೂ ಹೆದ್ದಾರಿಗಳ ಬದಿಗಳಲ್ಲಿ ಸಂಚರಿಸಿ ಭೂಮಿಗೆ ಮಾರಕವಾದ ಪ್ಲಾಸ್ಟಿಕ್ ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಅವರ ಅರಿವಿಗೆ ಬಾರದ ರೀತಿಯಲ್ಲಿ ಭೂಮಿ ತಾಯಿಯ ಸೇವೆ ಮಾಡುತ್ತಿರವುದು ಕಂಡು ಬರುತ್ತಿದೆ.
ಇಲ್ಲಿನ ಚಿಂದಿ ಹಾಗೂ ಪ್ಲಾಸ್ಟಿಕ್ ಸಂಗ್ರಹಿಸುವ ಮಂದಿಯು ಹೇಳುವ ಪ್ರಕಾರ ಕುಶಾಲನಗರ ಪಟ್ಟಣದ ಆಸು ಪಾಸಿನಲ್ಲಿ ಪ್ರತಿ ದಿನ ೧೫೦ ಕೆಜಿ ಯಷ್ಟು ಪ್ಲಾಸ್ಟಿಕ್ ಬಾಟಲಿಗಳು ಸಂಗ್ರಹವಾಗುತ್ತವೆ.
ಅದರಲ್ಲೂ ವಾರದ ಕೊನೆಯ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಪ್ರವಾಸಿ ವಾಹನಗಳಿಂದ ಹೊರ ಬಿಸಾಕುವ ಪ್ಲಾಸ್ಟಿಕ್ ಬಾಟಲಿಗಳ ಸಂಖ್ಯೆ ಜಾಸ್ತಿ ಇರುತ್ತದೆ ಎಂಬುದು ನಿಜಕ್ಕೂ ಅಚ್ಚರಿಯಾದರೂ ಕೂಡ ಇದು ಪರಿಸರ ಹಾಗೂ ಭೂಮಿಗೆ ಮಾರಕ ಎಂಬುದನ್ನು ಸ್ಥಳೀಯ ಪುರಸಭೆ ಅರಿಯಬೇಕಿದೆ.
ಆ ಮೂಲಕ ಈಗಾಗಲೇ ನಿಷೇಧದ ಹೇರಿಕೆ ಮಾಡಲು ಹೊರಟಿರುವ ಪ್ಲಾಸ್ಟಿಕ್ ಬಾಟಲಿಗಳಿಗೆ ಪರ್ಯಾಯವನ್ನು ಪುರಸಭೆ ಅರಿಯಬೇಕಿದೆ. ಕ್ಲೀನ್ ಕೂರ್ಗ್ ಹೆಸರಿನಲ್ಲಿ ಕೊಡಗಿನ ಪರಿಸರ ಸ್ನೇಹಿ ಹಲವು ಸಂಘಟನೆಗಳು ವಾರಾಂತ್ಯದಲ್ಲಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ಸ್ಥಳಗಳ ಆಸು ಪಾಸಿನಲ್ಲಿ ಸ್ವಚ್ಛತಾ ಸಪ್ತಾಹ ಆಚರಿಸುತ್ತಿರುವುದು ಶ್ಲಾಘನೀಯ.
ಆದ್ದರಿಂದ ಹೊಟ್ಟೆಪಾಡಿಗಾಗಿ ನಿತ್ಯವೂ ಪ್ಲಾಸ್ಟಿಕ್ ಸಂಗ್ರಹಿಸುವ ಈ ಶ್ರಮಿಕ ಮಂದಿಯನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದರೆ ಒಳಿತು.
- ಕೆ.ಎಸ್. ಮೂರ್ತಿ